ಕು. ದಿವ್ಯಾ ಹೆಗಡೆ ಕಬ್ಬಿನಗದ್ದೆ, ರಾಷ್ಟ್ರೋತ್ಥಾನ, ಬೆಂಗಳೂರು ಮಹಾಭಾರತ ಯುದ್ಧದ ಆರಂಭ. ಕುರುಕ್ಷೇತ್ರದ ರಣರಂಗದಲ್ಲಿ ಸುತ್ತಲೂ ನೆರೆದಿರುವ ವಿಶಾಲ ಜನಸ್ತೋಮ. ಕಣ್ಣುಹಾಯಿಸಿದಲ್ಲೆಲ್ಲಾ ತನ್ನದೇ ಜನಗಳು, ಸಹೋದರರು, ಗುರುವರ್ಯರು, ಬಂಧು-ಮಿತ್ರರು! ಇವರೊಟ್ಟಿಗೆ ತಾನು ಯುದ್ಧ ಮಾಡಬೇಕೇ? ತಮ್ಮವರ ಸಮಾಧಿಯ ಮೇಲೆ ನಿರ್ಮಿಸಿದ ಸಾಮ್ರಾಜ್ಯಕ್ಕೆ ಅರ್ಥವಾದರೂ ಏನು? ತನ್ನಿಂದ ಈ ಕೆಲಸವಾಗದು. ಮಾನವಕೋಟಿಯ ಸಂಹಾರಕ್ಕೆ ಕಾರಣವಾಗುವ ಈ ಯುದ್ಧದಿಂದ ತಾನು ವಿಮುಖವಾಗುತ್ತೇನೆ! ಎಂದು ಕೌರವ ಸೇನೆಯ ಬಂಧುಗಳನ್ನು ಕಂಡು ಅರ್ಜುನ ಖಿನ್ನನಾಗಿ, ಉತ್ಸಾಹವನ್ನು ಕಳೆದುಕೊಂಡು ಧನುರ್ಬಾಣಗಳನ್ನು ವಿಸರ್ಜಿಸುತ್ತಾನೆ. ಮಹಾಸಮರಾಂಗಣಕ್ಕೆ ಬೆನ್ನು ತೋರಲು ಸಿದ್ಧನಾಗುತ್ತಾನೆ. ಆಗ ಪರಮಾತ್ಮ ಶ್ರೀಕೃಷ್ಣನು ಅವನಿಗೆ ಕರ್ತವ್ಯದ ಪಥವನ್ನು ತೋರಿ, ಹೃದಯ ದೌರ್ಬಲ್ಯವನ್ನು ಕಳೆದು ಯುದ್ಧಕ್ಕೆ ಸನ್ನದ್ಧಗೊಳಿಸುತ್ತಾನೆ. ಆತ್ಮದ ಅಮರತ್ವದ ಬಗ್ಗೆ ತಿಳಿಸಿಕೊಡುತ್ತಾ, ಭಕ್ತಿ, ಕರ್ಮ, ಜ್ಞಾನ ಮತ್ತು ಧ್ಯಾನ ಮಾರ್ಗಗಳನ್ನು ವಿವರಿಸುತ್ತ, ತನ್ನ ವಿಶ್ವರೂಪ ದರ್ಶನವನ್ನು ಮಾಡುತ್ತಾನೆ. ಮಾರ್ಗಶಿರ ಮಾಸದ ಶುಕ್ಲಪಕ್ಷ ಏಕಾದಶಿಯ ಈ ದಿನ ಹದಿನೆಂಟು ಅಧ್ಯಾಯಗಳ ಧರ್ಮ ಮತ್ತು ತತ್ತ್ವಶಾಸ್ತ್ರಗಳ ಸಾರವನ್ನು, ಸತ್ಯದ ಪೂರ್ಣದೃಷ್ಟಿಯನ್ನು, ಮಾನವನ ಜೀವನ ಮೌಲ್ಯಗಳ ಅಮೃತವನ್ನು ನರನಿಗೆ ನಾರಾಯಣನು ದಯಪಾಲಿಸಿದ ಮಹಾಪರ್ವ ಗೀತಾ ಜಯಂತಿ. ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದಲ್ಲಿ ಬರುವ 700 ಶ್ಲೋಕಗಳ ಭಗವದ್ಗೀತೆ ಇಡೀ ಮನುಕುಲಕ್ಕೆ ಶ್ರೀಕೃಷ್ಣನಿತ್ತ ಉಪದೇಶ ರತ್ನಗಳ ದಿವ್ಯಮಾಲೆ. ಮಧ್ವಾಚಾರ್ಯರು ಹೇಳುವಂತೆ ‘ಭಗವದ್ಗೀತೆಯೆಂಬುದು ಮಹಾಭಾರತವೆಂಬ ಪಾರಿಜಾತ ಪುಷ್ಪದ ಮಧು. ಇಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಲೌಕಿಕ-ಪರಮಾರ್ಥಗಳ ಒಳಗಿನ ಸತ್ಯವನ್ನು ಬೋಧಿಸುತ್ತಾನೆ. ಹುಟ್ಟಿದವರಿಗೆ ಸಾವು ನಿಶ್ಚಿತ. ಯಾರನ್ನಾದರೂ ನಾನು ಕೊಲ್ಲುತ್ತೇನೆ ಎನ್ನುವುದು ವ್ಯರ್ಥ ಅಭಿಮಾನ. ಶರೀರ ಮಾತ್ರವೇ ನಾಶ ಹೊಂದುವುದು. ಆತ್ಮಕ್ಕೆ ಜನ್ಮವೂ ಇಲ್ಲ, ಮರಣವೂ ಇಲ್ಲ. ಕ್ರೊಧ, ಲೋಭ, ಮೋಹಗಳನ್ನು ಬಿಟ್ಟು ನಿನ್ನ ಕರ್ತವ್ಯವನ್ನು ನೀನು ಮಾಡು. ಸ್ಥಿತ ಪ್ರಜ್ಞನಿಗೆ ಸೋಲು, ಗೆಲುವು ಎಲ್ಲವೂ ಒಂದೇ ಆಗಿರುತ್ತದೆ.ಯಾವುದೇ ಫಲವನ್ನು ಚಿಂತಿಸದೇ ನಿನ್ನ ಕರ್ತವ್ಯದಲ್ಲಿ ನೀನು ನಿರತನಾಗು. ಕರ್ಮಯೋಗಿಯು ಎಲ್ಲರಿಗಿಂತ ಶ್ರೇಷ್ಥನು ಎಂದು ಕರ್ತವ್ಯನಿಷ್ಠೆಯ ಮಹಾಸಂದೇಶವನ್ನು ನೀಡುತ್ತಾನೆ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಶ್ರೀಕೃಷ್ಣನು ಇಡೀ ಬದುಕಿನ ಸಾರವನ್ನು, ಆತ್ಮಕ್ಕೆ ಸಾವಿಲ್ಲ-ದೇಹಕ್ಕೆ ಉಳಿವಿಲ್ಲ ಎಂಬ ಸಂದೇಶವನ್ನು, ಸ್ವಸ್ಥಸಮಾಜಕ್ಕೆ ಇಂದ್ರಿಯ ನಿಗ್ರಹವೆಂಬ ಸೂತ್ರವನ್ನು ಸಾಮಾನ್ಯನಲ್ಲಿ ಸಾಮಾನ್ಯನೂ ಸುಲಭಕ್ಕೆ ಅರ್ಥೈಸಿಕೊಳ್ಳುವಂತೆ ತಿಳಿಸಿದ್ದಾನೆ. ಲೌಕಿಕ ಜೀವನದ ಜೊತೆಗೆ ಅಲೌಕಿಕ ಜೀವನದ ಪಥವನ್ನು ವಿವರಿಸುತ್ತಾ, ಸಾಮಾಜಿಕ ಚಿಂತನೆಯ ಸಾಧನವನ್ನೂ ವಿವರಿಸಿದ್ದಾನೆ. ಸಕಲ ಜೀವಜಂತುಗಳಿಗೆ ಜೀವನ ನಿರ್ವಹಣೆಯ ಮಹಾಮಾರ್ಗವನ್ನೂ, ಪಾರಮಾರ್ಥಿಕ ಚಿಂತನೆಯ ಮಹತ್ಸಂದೇಶವನ್ನೂ ಸುಲಭವಾಗಿ ಬಿತ್ತರಗೊಳಿಸಿದ್ದಾನೆ. ಭೂತ, ಭವಿಷ್ಯ, ವರ್ತಮಾನಗಳ ಪ್ರಜ್ಞೆ, ಪ್ರಸ್ತುತಿ, ಸತ್ವಗಳೆಲ್ಲವನ್ನೂ ಸುಲಿದ ಬಾಳೆಯ ಹಣ್ಣಿನಂತೆ ಲೋಕಕ್ಕೆ ನಿವೇದಿಸುವ ಮಹಾಕಾವ್ಯ ಗೀತೆಯ ಹೊರತಾಗಿ ಬೇರೊಂದು ಇರಲಾರದು. ಅಂತಹ ಭಗವದ್ಗೀತೆ ಶ್ರೀಆದಿಶಂಕರಾಚಾರ್ಯರ ಅಂತಃಚಕ್ಷುವಿಗೆ ಅಚ್ಚರಿಯಾಗಿ ಕಾಡಿ, ತನ್ನ ಬಾಹುಲ್ಯವನ್ನು ಜಗನ್ನಿವೇದನೆಗೊಳಿಸಲು ಪ್ರೇರಣೆ ನೀಡಿದ್ದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ. ಜಗತ್ತಿಗೆ ಅಗಣಿತ ವರ್ಷಗಳ ಹಿಂದಿನಿಂದ ಹೇರಳವಾದ ಸತ್ವಗಳನ್ನು, ಸಾಮಾಜಿಕ ಕಳಕಳಿಯನ್ನು, ಬದುಕಿನ ಬದ್ಧತೆಗಳನ್ನು ಕಟ್ಟಿಕೊಡುವಲ್ಲಿ ಗೀತೆಯ ಮಹತ್ವ ಅನುಪಮವಾದದ್ದು. ಮನುಷ್ಯನ ಆತ್ಮೋನ್ನತಿಗೆ ದಾರಿದೀಪವಾಗಿ, ಆತ್ಮಶುದ್ಧಿ ಮತ್ತು ಜ್ಞಾನಶುದ್ಧಿಗೆ ಮಹೋನ್ನತ ಮಾರ್ಗವಾಗಿ ಹರಿದು ಬಂದಿರುವ ಗೀತೆಯ ಮಾಹಾತ್ಮ್ಯ ಅನಂತವಾದದ್ದು, ಅಪರಿಮಿತವಾದದ್ದು. ಹಾಗಾಗಿ ಗೀತೆಯೆಂಬುದು ಸರ್ವಕಾಲಕ್ಕೂ, ಸರ್ವಜೀವರಿಗೂ ಆತ್ಮೋನ್ನತಿಯ ಮಾರ್ಗವನ್ನು ತೆರೆದಿಟ್ಟ ಅಪೂರ್ವ ಮಹಾಕಾವ್ಯ ಎಂಬುದರಲ್ಲಿ ಎರಡು ಮಾತಿಲ್ಲ.
