Call Us Now
+91 94482 84602
Email Us
info@rashtrotthana.org

ಪ್ರತಿಭಾನ್ವಿತರಿಗೆ ಕಲ್ಪವೃಕ್ಷ ‘ತಪಸ್ ಮತ್ತು ಸಾಧನಾ’  

  • ಜನ ಶಿಕ್ಷಣ, ಜನ ಜಾಗೃತಿ,ಜನ ಸೇವಾ ಎಂಬ ಪ್ರಮುಖ ಧ್ಯೇಯಗಳನ್ನಿಟ್ಟುಕೊಂಡು ನಿರಂತರವಾಗಿ ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ‘ರಾಷ್ಟ್ರೋತ್ಥಾನ ಪರಿಷತ್’ ದೇಶ ಕಂಡ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲೊಂದು.”ಅನುಕೂಲಕರ ಸಮಯಕ್ಕಾಗಿ ಕಾಯುತ್ತಾ ಕೂರದೇ,ಸಿಕ್ಕ ಸಮಯವನ್ನೇ ಅನುಕೂಲಕರವಾಗುವಂತೆ ಸೃಷ್ಟಿಸಿಕೊಳ್ಳುವುದೇ ಸೃಜನಶೀಲತೆ” ಎಂದ ದಿ.ಯಾದವರಾವ್ ಜೋಶಿಯವರಂತಹ ದಾರ್ಶನಿಕರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ರಾಷ್ಟ್ರೋತ್ಥಾನವೆಂಬ ಸೇವಾ ಪ್ರವಾಹಕ್ಕೆ ಈಗ ತುಂಬು 56 ವರ್ಷ.”ರಾಷ್ಟ್ರೋತ್ಥಾನವೆಂಬುದು ಕಲ್ಪವೃಕ್ಷ. ಯಾರು ಬೇಕಾದರೂ ಇಲ್ಲಿಂದ ಜ್ಞಾನವೆಂಬ ಫಲವನ್ನು ಸವಿಯಬಹುದು.ಆದರೆ ಅಂಥ ಫಲವುಂಡವರ ಬದುಕು ಸಮಾಜಕ್ಕೆ ಅರ್ಪಿತವಾಗಬೇಕು” ಎಂದ ಮೋಹನ್ ಭಾಗವತರ ಮಹಾಸಂದೇಶವೂ ರಾಷ್ಟ್ರೋತ್ಥಾನದ ನಾಡಿಮಿಡಿತವೇ.ಇಂಥ ಅಪೂರ್ವ ಸಂಸ್ಥೆಯ ಸುದೀರ್ಘ ಹರಿವು ಸಮಾಜಕ್ಕಾಗಿ ಕೈಗೊಂಡ ಕಾರ್ಯಗಳು ಹತ್ತು ಹಲವು.’ಅರಿವೇ ಗುರು’ ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾಕಾರಗೊಳಿಸಲು ಮುಂದಡಿಯಿಟ್ಟಿರುವ ‘ತಪಸ್ ಮತ್ತು ಸಾಧನಾ’ ಶಿಕ್ಷಣ ಕ್ಷೇತ್ರದಲ್ಲೊಂದು ಮಹತ್ವದ ಹೆಜ್ಜೆ.

       ಬಡತನ ಸಾಧನೆಗೆ ಅಡ್ಡಿಯಾಗಬಾರದು.ಆರ್ಥಿಕ ದೌರ್ಬಲ್ಯದಿಂದ ಯಾವ ಪ್ರತಿಭೆಗಳೂ ಕಮರಿ ಹೋಗಬಾರದು ಎಂಬ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಆರಂಭಿಸಿದ ತಪಸ್ ಮತ್ತು ಸಾಧನಾ ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ.ಭಾರತೀಯರ ಬುದ್ಧಿವಂತಿಕೆಯನ್ನು ಜಗತ್ತು ಕುತೂಹಲದಿಂದ ನೋಡುತ್ತಿರುವಾಗ ಸೂಕ್ತ ಮಾರ್ಗದರ್ಶನದ ಕೊರತೆ ಮತ್ತು ಆರ್ಥಿಕ ದುರ್ಬಲತೆ ದೇಶದಲ್ಲಿ ಪ್ರತಿಭೆಗಳು ಹೊರಹೊಮ್ಮದಿರಲು ಕಾರಣವಾಗಬಾರದು.ಅಂಥ ಸಮಸ್ಯೆಗಳನ್ನು ನಿವಾರಿಸಿ ಕುಗ್ರಾಮಗಳಲ್ಲಿ ವಾಸಿಸುವ ಕಡುಬಡವನ ಮಗುವೂ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೋತ್ಥಾನ ಪರಿಷತ್ ಬಾಲಕರಿಗಾಗಿ ‘ತಪಸ್’ ಹಾಗೂ ಬಾಲಕಿಯರಿಗಾಗಿ ‘ಸಾಧನಾ’ ಎಂಬ ವಿಶಿಷ್ಟ ಯೋಜನೆಯನ್ನು ಮುಡೆಸುತ್ತಿದೆ.

   2012 ರಲ್ಲಿ ಪ್ರಾರಂಭವಾದ ‘ತಪಸ್’ ಯೋಜನೆ ಆರ್ಥಿಕವಾಗಿ ಹಿಂದುಳಿದ ರಾಜ್ಯದ ಪ್ರತಿಭಾವಂತ ಗಂಡು ಮಕ್ಕಳಿಗೆ ಉಚಿತ ಊಟ,ವಸತಿ ಸಹಿತ ಪಿ.ಯು.ಸಿ.ಶಿಕ್ಷಣದ ಜೊತೆಗೆ ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಈ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಾಲೇಜು ಶುಲ್ಕ, ಅಧ್ಯಯನ ಸಾಮಗ್ರಿ, ತರಬೇತಿ ಸೇರಿದಂತೆ 2 ವರ್ಷಗಳ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳ ಶ್ರೇಷ್ಠ ಗುಣಮಟ್ಟದ ಪಠ್ಯಗಳನ್ನು ಸಿದ್ಧಪಡಿಸಿ,ಅವುಗಳನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಬೇಸ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ.

   ರಾಜ್ಯದ ಎಲ್ಲ ಪ್ರೌಢಶಾಲೆಗಳಿಗೆ ವರ್ಷಕ್ಕೆರಡು ಬಾರಿ ತಪಸ್ ಪತ್ರಿಕೆಗಳನ್ನು ಕಳುಹಿಸಿ ಪರೀಕ್ಷೆಗೆ ನೋಂದಣಿ ಮಾಡುವಂತೆ ವಿದ್ಯಾರ್ಥಿಗಳಲ್ಲಿ ವಿನಂತಿ ಮಾಡಲಾಗುತ್ತದೆ. ಪ್ರತಿ ವರ್ಷ ರಾಜ್ಯದ 100ಕ್ಕಿಂತ ಹೆಚ್ಚು ಮೊರಾರ್ಜಿ, ಜೆ.ಎನ್. ವಿ.ಸೇರಿದಂತೆ ಹಲವು ಸರ್ಕಾರಿ ಶಾಲೆಗಳನ್ನು ಸಂಪರ್ಕಿಸಿ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗುತ್ತದೆ.9 ನೇ ತರಗತಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ,ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಮೀರಿರದ ವಿದ್ಯಾರ್ಥಿಗಳಿಗೆ ರಾಜ್ಯದ 40 ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಸಲಾಗುತ್ತದೆ. ಯಾವುದೇ ಜಾತಿ,ಧರ್ಮ,ಪ್ರದೇಶಗಳ ಬೇಧವಿಲ್ಲದೆ ಕೇವಲ ಅಂಕಗಳ ಆಧಾರದ ಮೇಲೆ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ,ಆ ವಿದ್ಯಾರ್ಥಿಗಳ ಮನೆಗೆ ರಾಷ್ಟ್ರೋತ್ಥಾನದ ಕಾರ್ಯಕರ್ತರು ಖುದ್ದು ಭೇಟಿ ನೀಡಿ ಅವರ ಆರ್ಥಿಕ ಸ್ಥಿತಿಗತಿ, ವಾಸ್ತವ ಪರಿಸ್ಥಿತಿಗಳನ್ನು ಗಮನಿಸುತ್ತಾರೆ.10 ನೇ ತರಗತಿಯ ಪರೀಕ್ಷೆ ಮುಗಿದ ನಂತರ ಬೆಂಗಳೂರಿನಲ್ಲಿ 10 ದಿನಗಳ ವಸತಿ ಶಿಬಿರವನ್ನು ಏರ್ಪಾಟು ಮಾಡಿ ವಿದ್ಯಾರ್ಥಿಗಳ ಗ್ರಹಣಶಕ್ತಿ,ಆಸಕ್ತಿ, ಬದ್ಧತೆ,ನಡವಳಿಕೆ,ಸಮಯದ ಸದುಪಯೋಗ ಇತ್ಯಾದಿಗಳ ಆಧಾರದ ಮೇಲೆ 150 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

  ಈ ರೀತಿ ಆಯ್ಕೆಯಾದ 7 ತಂಡಗಳ 300 ಕ್ಕೂ ಅಧಿಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಎರಡು ವರ್ಷಗಳ ಶಿಕ್ಷಣವನ್ನು ಪೂರೈಸಿದ್ದಾರೆ.ಇದುವರೆಗೂ 23 ವಿದ್ಯಾರ್ಥಿಗಳು ದೇಶದ ವಿವಿಧ ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ.50 ಕ್ಕೂ ಅಧಿಕ ಮಂದಿ ಎನ್.ಐ.ಟಿ ಪ್ರವೇಶ ಪಡೆದಿದ್ದರೆ, ಇನ್ನುಳಿದವರು ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಾದ ಆರ್.ವಿ,ಪಿ.ಇ.ಎಸ್,ಬಿ.ಎಂ.ಎಸ್.ಕಾಲೇಜುಗಳಲ್ಲಿ ಸೇರ್ಪಡೆಯಾಗಿದ್ದಾರೆ.’ತಪಸ್’ ಗೆ ಸೇರ್ಪಡೆಗೊಂಡ ಮೊದಲನೇ ತಂಡದವರು ಈ ವರ್ಷ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾರೆ.ಶಿಕ್ಷಣದೊಂದಿಗೆ ಸಮಾಜದ ಸ್ವಾಸ್ಥ್ಯದ ಕನಸುಕಂಡ ರಾಷ್ಟ್ರೋತ್ಥಾನದ ಈ ಮಹತ್ವಾಕಾಂಕ್ಷಿ ಯೋಜನೆ ವಿದ್ಯಾರ್ಥಿಗಳ ಜೀವನವಷ್ಟೇ ಅಲ್ಲದೇ ಅವರ ಇಡೀ ಕುಟುಂಬದ ಚಿತ್ರಣವನ್ನೇ ಬದಲಾಯಿಸಿದೆ.

     ರಾಷ್ಟ್ರೋತ್ಥಾನ ಪರಿಷತ್ ರಾಜ್ಯದ ಬಡ ಹೆಣ್ಣುಮಕ್ಕಳ ಕಷ್ಟವನ್ನು ಅರಿತು,ಅವರನ್ನೂ ಸಾಧನೆಯ ಪಥಕ್ಕೆ ತಂದುನಿಲ್ಲಿಸುವ ಉದ್ದೇಶದಿಂದ ‘ಸಾಧನಾ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.ಪ್ರತಿಭೆಯಿದ್ದರೂ ತಮ್ಮ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೇ,ಆರ್ಥಿಕವಾಗಿ ಹಿಂದುಳಿದ ಅವೆಷ್ಟೋ ಪಾಲಕರು ಮಕ್ಕಳ ಮದುವೆ ಮಾಡಿಬಿಡುವ ಉದಾಹರಣೆಗಳನ್ನು ನೋಡುತ್ತೇವೆ.ಅಂಥಾ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕಬೇಕು.ಬಡತನದ ಕಾರಣದಿಂದ ಅವರ ಪ್ರತಿಭೆಗಳು ಕಮರಿಹೋಗಬಾರದು ಎಂಬ ಧ್ಯೇಯವನ್ನಿಟ್ಟುಕೊಂಡು 2017-18 ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೋತ್ಥಾನ ಪರಿಷತ್ತು  ‘ಸಾಧನಾ’ ಯೋಜನೆಯನ್ನು ಆರಂಭಿಸಿದೆ.ಬಾಲಕರಿಗಾಗಿ ಇರುವ ತಪಸ್ ನಂತೆಯೇ ನಡೆಯುವ ಈ ಯೋಜನೆಯಲ್ಲಿ ಆಯ್ಕೆಯಾದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳ ಪಿಯುಸಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವುದರೊಂದಿಗೆ ಎನ್ಇಇಟಿ ಹಾಗೂ ಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.ಇದರ ಜೊತೆಗೆ ಶಿಕ್ಷಕರಾಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿನಿಯರಿಗೆ ಒಟ್ಟು ಆರು ವರ್ಷಗಳ ಪಿಯುಸಿ,ಬಿ.ಎಸ್ಸಿ.ಮತ್ತು ಇಂಟಿಗ್ರೇಟೆಡ್ ಬಿ.ಎಡ್ ಶಿಕ್ಷಣವನ್ನು ನೀಡಲಾಗುತ್ತದೆ.ಇದುವರೆಗೆ ‘ಸಾಧನಾ’ ದ ಮೂರು ತಂಡಗಳು ಹೊರಬಿದ್ದಿದ್ದು 12 ವಿದ್ಯಾರ್ಥಿನಿಯರು ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.2020-21 ನೇ ಸಾಲಿನಲ್ಲಿ 10 ವಿದ್ಯಾರ್ಥಿನಿಯರು ವೈದ್ಯಕೀಯ ಶಿಕ್ಷಣಕ್ಕೆ ಹಾಗೂ ಮೂವರು ಕೃಷಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.ಉಳಿದ ವಿದ್ಯಾರ್ಥಿನಿಯರು ತಾಂತ್ರಿಕ ಶಿಕ್ಷಣಕ್ಕೆ, ಫಾರ್ಮಸಿ ಮತ್ತು ಬಯೋ ಇಂಫಾರ್ಮೇಷನ್ ಗೆ ಪ್ರವೇಶ ಪಡೆದಿದ್ದಾರೆ.

    ಸಂಸ್ಕಾರಯುಕ್ತ ಮತ್ತು ರಾಷ್ಟ್ರನಿಷ್ಠ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಎಂಬುದು ರಾಷ್ಟ್ರೋತ್ಥಾನ ಪರಿಷತ್ತಿನ ಬಹುಮುಖ್ಯವಾದ ಧ್ಯೇಯ.ಆ ನಿಟ್ಟಿನಲ್ಲಿ ಸಮಾಜ ಮತ್ತು ಸೇವೆಯ ನಡುವಿನ ಕೊಂಡಿಯಾಗಿ,ಸದೃಢ ಸಮಾಜದ ನಿರ್ಮಾಣದಲ್ಲಿ ತೊಡಗಿಕೊಂಡಿರುವ ರಾಷ್ಟ್ರೋತ್ಥಾನದ  ಕಾರ್ಯಗಳು ಶ್ಲಾಘನೀಯ.ಇಂಜಿನಿಯರ್ ಮತ್ತು ಡಾಕ್ಟರ್ ಆಗುವ ಬಡವರ ಕನಸು ಗಗನ ಕುಸುಮವಲ್ಲ.ಮಹತ್ವಾಕಾಂಕ್ಷೆ ಮತ್ತು ಪ್ರತಿಭೆಯಿದ್ದರೆ ಅಂಥವರ ಕನಸು ಕೂಡ ನನಸಾಗಬಲ್ಲದು ಎಂಬುದನ್ನು ‘ತಪಸ್ ಮತ್ತು ಸಾಧನಾ’ ಗಳು ತೋರಿಸಿಕೊಟ್ಟಿವೆ.