Call Us Now
+91 94482 84602
Email Us
info@rashtrotthana.org

ಸ್ವಾತಂತ್ರ್ಯ ದಿನದ ಶುಭಾಶಯಗಳು

ಭಾರತ ಇಂದು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 75 ವರ್ಷಗಳ ಈ ಸುದೀರ್ಘ ಪಯಣದಲ್ಲಿ ದೇಶ ಹಲವಾರು ಏಳುಬೀಳುಗಳನ್ನೂ ಕಂಡಿದೆ. ರಾಷ್ಟ್ರಜೀವನವನ್ನು ಉತ್ಕೃಷ್ಟಗೊಳಿಸಲು ಹಲವು ಮಹನೀಯರು ಅನವರತ ಶ್ರಮಿಸಿದ್ದಾರೆ. ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಸರ್ವಸ್ವವನ್ನು ಧಾರೆಯೆರೆದು ದೇಶಕ್ಕಾಗಿ ದುಡಿದಿದ್ದಾರೆ. ಇಂಥವರ ಜೊತೆಜೊತೆಗೆ ದೇಶದ್ರೋಹಿಗಳನ್ನು, ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನೂ ದೇಶ ಸಾಕಷ್ಟು ಕಂಡಿದೆ. ದೇಶದ ಮೇಲೆ ಆಕ್ರಮಣಗಳು ನಡೆದಿವೆ. ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವರ್ಚಸ್ಸನ್ನು ಕುಂದಿಸುವ ಪ್ರಯತ್ನಗಳೂ ಆಗಾಗ ನಡೆಯುತ್ತಲೇ ಬಂದಿವೆ. ಆದರೆ ಇಂಥ ಹಲವು ಏಳು-ಬೀಳುಗಳ ಮೆಟ್ಟಿಲುಗಳನ್ನು ದಾಟಿ ಭಾರತ ಇಂದು ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುವ ಸುವರ್ಣ ಕಾಲಘಟ್ಟವನ್ನು ತಲುಪಿದೆ. 

ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾತ್ಮರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸ್ವಾತಂತ್ರ್ಯದ ಹೊಂಬೆಳಕು ಮೂಡಲು ಅಸಂಖ್ಯಾತ ಜನರು ತಮ್ಮ ವೈಯಕ್ತಿಕ ಬದುಕನ್ನು ಗಾಢ ಕಗ್ಗತ್ತಲಿಗೆ ನೂಕಿದ್ದಾರೆ. ದೇಶದ ಹಿತವೇ ತಮ್ಮ ಹಿತವೆಂದು ಭಾವಿಸಿ ಸರ್ವಸ್ವವನ್ನೂ ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ಅಂಥ ಧೀಮಂತ ವ್ಯಕ್ತಿಗಳು ತಮ್ಮ ಮಹೋನ್ನತ ಆದರ್ಶದ ಮೂಲಕ ಯುವಪೀಳಿಗೆಗೆ ಚಿರಂತನ ಸ್ಪೂರ್ತಿಯಾಗಿ ನಿಂತಿದ್ದಾರೆ. ಆ ಮಹನೀಯರು ಸ್ವಾತಂತ್ರ್ಯದ ಬಗೆಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದರು. ಅಧಿಕಾರ ಹಸ್ತಾಂತರ ಮಾತ್ರ ಸ್ವಾತಂತ್ರ್ಯವಲ್ಲ, ಬದಲಾಗಿ ರಾಷ್ಟ್ರಜೀವನದ ಸರ್ವಮುಖಗಳಲ್ಲಿಯೂ ಪ್ರಗತಿಯಾದರೆ ಮಾತ್ರ ಅದು ನಿಜವಾದ ಸ್ವಾತಂತ್ರ್ಯ ಎಂದು ನಂಬಿದ್ದರು. 

ಪರಕೀಯರ ದುರಾಡಳಿತದಿಂದ ಬೇಸತ್ತ ನಾಡಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಬೌದ್ಧಿಕ, ಸಾಂಸ್ಕೃತಿಕ ರಂಗಗಳಲ್ಲಿಯೂ ಸಂಕರವುಂಟಾಗಿತ್ತು. ಜನರಿಗೆ ತಮ್ಮದೇ ನೆಲದ ಶ್ರೇಷ್ಠತೆಯ ಕುರಿತು ವಿಸ್ಮೃತಿ ಮೂಡಿತ್ತು. ಭಾರತದ ನೈಜ ಶಿಕ್ಷಣಪದ್ಧತಿಯಿಂದ ಹಿಡಿದು ಸಮಾಜದ ವಿವಿಧ ಕ್ಷೇತ್ರಗಳು ಭಾರತೀಯತೆಯನ್ನು ಕಳೆದುಕೊಂಡಿದ್ದವು. ಅಂಥ ಸಂದರ್ಭದಲ್ಲಿ ನಿಜವಾದ ಭಾರತೀಯತ್ವವನ್ನು ಜನಮನದಲ್ಲಿ ಬೇರೂರಿಸುವ ಅಗತ್ಯವನ್ನು ಹಿರಿಯರು ಮನಗಂಡಿದ್ದರು. ಭಾರತವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಅವರದಾಗಿತ್ತು. ಸುಭಾಷ್ ಚಂದ್ರ ಬೋಸ್, ಮಹರ್ಷಿ ಅರವಿಂದ, ವೀರ ಸಾವರ್ಕರ್, ದಿ. ಯಾದವರಾವ್ ಜೋಷಿ, ಡಾ. ಹೆಡಗೇವಾರ್, ಶ್ರೀ ಗುರೂಜಿ ಗೋಳ್ವಲ್ಕರ್ ಮೊದಲಾದ ಪ್ರಾತಃಸ್ಮರಣೀಯರು ರಾಷ್ಟ್ರದ ಭವಿಷ್ಯದ ಕುರಿತು ಉಜ್ವಲವಾದ ಕನಸುಗಳನ್ನು ಕಂಡಿದ್ದರು. 

ಇಂದು ಅವರೆಲ್ಲ ಕಂಡ ಕನಸುಗಳನ್ನು ನನಸು ಮಾಡಿ, ದೇಶವನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಭಾರತದ ವೈಭವದ ದಿನಗಳನ್ನು ಮರುಸೃಷ್ಟಿಸಿ, ಭಾರತಾಂಬೆಯನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಮುಂದೆ ಸಾಗಬೇಕಿದೆ. ನಮ್ಮ ಹಿರಿಯರ ಸ್ಪೂರ್ತಿ, ಪ್ರೇರಣೆ, ಮಾರ್ಗದರ್ಶನದಿಂದ ಸದೃಢ ಭಾರತವನ್ನು ಕಟ್ಟುವ ಸಂಕಲ್ಪ ಮಾಡೋಣ. ಅವರು ಹೋರಾಡಿ, ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ದೇಶನಿರ್ಮಿತಿಯ ಕಾರ್ಯಕ್ಕಾಗಿ ಬಳಸಿಕೊಂಡು ಅವರೆಲ್ಲರ ಋಣವನ್ನು ತೀರಿಸುವ ಪ್ರಯತ್ನ ಮಾಡೋಣ.