ಸಾವಿರಸಲ ಬಿಚ್ಚಿಟ್ಟು ಆಸ್ವಾದಿಸಬಹುದಾದ ಏಕೈಕ ಉಡುಗೊರೆಯೆಂದರೆ ಪುಸ್ತಕ ಮಾತ್ರ: ಉತ್ತಮ ಗ್ರಂಥವೊಂದರ ನಾಶ ವಿಚಾರವಂತಿಕೆಯ ಅವಸಾನ: ಸ್ವಾಮಿ ವೀರೇಶಾನಂದಜಿ ಮಹರಾಜ್: ಕನ್ನಡ ಪುಸ್ತಕ ಹಬ್ಬ ಸಮಾರೋಪದಲ್ಲಿ ಆಶೀರ್ವಚನ
ಬೆಂಗಳೂರು, ನ.27: ಬುದ್ದಿ-ಭಾವಗಳ ಧನಾತ್ಮಕ ಬೆಳವಣಿಗೆಗೆ ಓದು ಬೆಂಬಲ ನೀಡುತ್ತದೆ. ಸಕಾರಾತ್ಮಕ ವಸ್ತು-ವಿಷಯಗಳನ್ನು ತೆರೆದಿಡುವ ಪುಸ್ತಕದ ಓದು ವ್ಯಕ್ತಿತ್ವ ರೂಪಿಸುತ್ತದೆ. ಇಂತಹ ಸದಾಶಯದ ಸಮಾಜ ನಿರ್ಮಾಣಕ್ಕೆ ಅಡಿಗಲ್ಲಾಗಿ ರಾಷ್ಟ್ರೋತ್ಥಾನ ಪರಿಷತ್ತಿನ ಪುಸ್ತಕ-ಸಾಹಿತ್ಯ ದೌತ್ಯ ಕನ್ನಡ ಸಾರಸ್ವತ ಲೋಕದ ಮಹಾನ್ ಕೊಡುಗೆಗಳಲ್ಲಿ ಒಂದು ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ವೀರೇಶಾನಂದಜಿ ಮಹರಾಜ್ ಆಶೀರ್ವಚನದಲ್ಲಿ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಕೇಶವ ಶಿಲ್ಪದಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ‘ಕನ್ನಡ ಪುಸ್ತಕ ಹಬ್ಬ-2022’ ಕಾರ್ಯಕ್ರಮದ ಭಾನುವಾರ ನಡೆದ ಸಮಾರೋಪದಲ್ಲಿ ಶ್ರೀಗಳು ಮಾತನಾಡಿದರು.
ಭಾಷೆ, ಭಾವನೆಗಳು ಅಂತರಂಗದಲ್ಲಿ ಸುಂದರ ಸ್ವರೂಪ ಪಡೆಯಬೇಕಾದರೆ ಅದಕ್ಕಿರುವ ಸಂಸ್ಕಾರ ಮುಖ್ಯವಾದುದಾಗಿದೆ. ಒಳಗಿನ ಅಂತಃಕರಣಕ್ಕೆ ಇಂತಹ ಸದ್ವಿಚಾರದ ಸಂಸ್ಕಾರಗಳನ್ನು ಪುಸ್ತಕದ ಓದು ನೀಡುತ್ತದೆ. ಭಾರತಕ್ಕೆ ದಾಳಿಯಿಟ್ಟ ಘಜನಿ ಮೊಹಮ್ಮದನ ಜೊತೆಗಿದ್ದ ಅಲ್ ಬರೋನಿ ಘಜನಿಗಿಂತ ವ್ಯತ್ಯಸ್ತವಾಗಿ ಭಾರತವನ್ನು ಕಾಣಲು ಸಾಧ್ಯವಾದುದು ಆತನ ಓದಿನ ಕಾರಣದಿಂದ ಎಂಬುದನ್ನು ಆತನೇ ಉಲ್ಲೇಖಿಸಿದ್ದಾನೆ. ಉತ್ತಮ ಗ್ರಂಥವೊಂದರ ನಾಶ ವಿಚಾರವಂತಿಕೆಯ ಅವಸಾನಕ್ಕೆ ಕಾರಣ ಎಂಬ ಬಗ್ಗೆ ಆಂಗ್ಲ ಕವಿ ವಿಲ್ಸನ್ ಉಲ್ಲೇಖಿಸಿರುವುದು ಓದುವಿಕೆಯ ಮಹತ್ವಕ್ಕೆ ಹಿಡಿದ ಕನ್ನಡಿ ಎಂದು ಅವರು ಈ ಸಂದರ್ಭ ಉಲ್ಲೇಖಿಸಿದರು. ಶಿಕ್ಷಣದಿಂದ ನೈತಿಕತೆ ಮೂಡಿದರೆ ಉತ್ತಮ ಗ್ರಂಥಗಳ ಓದುವಿಕೆ ಜೀವಂತಿಕೆ ನೀಡುತ್ತದೆ. ಸಾವಿರ ಸಲ ಬಿಚ್ಚಿಟ್ಟು ಆಸ್ವಾದಿಸಬಹುದಾದ ಉಡುಗೊರೆಯೊಂದಿದ್ದರೆ ಅದು ಪುಸ್ತಕಗಳು ಎಂದು ಶ್ರೀಗಳು ವಿವಿಧ ಆದರ್ಶ ಉದಾಹರಣೆಗಳ ಮೂಲಕ ತಿಳಿಸಿ, ರಾಷ್ಟ್ರೋತ್ಥಾನದ ಸಾಹಿತ್ಯ ಕ್ರಾಂತಿ ಸುಸಂಸ್ಕೃತ ಸಮಾಜ ನಿರ್ಮಾಣದ ಪ್ರಧಾನ ಆಧಾರ ಸ್ತಂಭ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿಗಳಿಂದ ಮೂಡಿಬಂದ ಜೀವನ ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಕಾರಣವಾಗುತ್ತದೆ. ಭಾಷೆ, ಸಂಸ್ಕೃತಿ ಉಳಿಯಲು ಪುಸ್ತಕ, ಓದುವ ಹವ್ಯಾಸಗಳು ಅವ್ಯಾಹತವಾಗಿ ಬೆಳೆಯಬೇಕು. ಇಂದಿನ ಆರ್ಥಿಕ ಸ್ವಾರ್ಥ ಜಗತ್ತಿನ ಇನ್ನಿಲ್ಲದ ದುರಿತಕ್ಕೆ, ಬೌದ್ದಿಕ ವಿಕಾಸ, ಭಾವಪ್ರಪಂಚದ ವಿಮುಖತೆಗೆ ಕಾರಣವಾಗಿದ್ದು, ವ್ಯಾಪಾರಿ ಮನೋಸ್ಥಿತಿಯಿಂದ ಒಂದಿಷ್ಟಾದರೂ ಹೊರನಿಂತು ಸಾಹಿತ್ಯ, ಸಂಸ್ಕೃತಿ, ಓದುವಿಕೆಯಂತಹ ಸೃಜನಾತ್ಮಕತೆಯೆಡೆಗೆ ತೊಡಗಿಸಿಕೊಳ್ಳದಿದ್ದರೆ ಸಂಘರ್ಷ, ಸವಾಲುಗಳು ಬೆಂಬಿಡದೆ ನೆಮ್ಮದಿ ಕೆಡಿಸುವವು ಎಂದು ಎಚ್ಚರಿಸಿದರು.
ಸಮಾರಂಭದಲ್ಲಿ ಶಿವಮೊಗ್ಗದ ಹಿರಿಯ ಸಾಹಿತ್ಯ ಪರಿಚಾರಕ, ಪುಸ್ತಕ ಕ್ರಾಂತಿಯ ಸಾಧಕ ಶ್ರೀ ಪಿ ಶಿವಣ್ಣ ಅವರನ್ನು ಆದರಪೂರ್ವಕ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಜಡ್ಡುಗಟ್ಟಿದ ಜನಮನವನ್ನು ಬದಲಾಯಿಸಲು ಮತ್ತೆ ಹೊತ್ತಗೆಗಳ ಮುಂದೆ ಕೈಜೋಡಿಸದೇ ಪರ್ಯಾಯವಿಲ್ಲ ಎಂಬ ಅರಿವು ಜಾಗೃತಗೊಳ್ಳಬೇಕಿದೆ. ಬದಲಾವಣೆಯೆಂಬುದು ಸಾಧ್ಯವಿದ್ದರೆ ಅದು ಉತ್ತಮ ಕೃತಿಗಳ ಮೂಲಕ ಸಾಧ್ಯ ಎಂಬುದು ಹಲವು ನಿದರ್ಶನಗಳಿಂದ ವೇದ್ಯವಾಗಿದೆ ಎಂದರು. ಪುಸ್ತಕ ಮಾರಾಟ ಎಂಬುದು ಕೇವಲ ವ್ಯಾಪಾರದ ಸರಕಾಗದೇ, ಜನರನ್ನು ಸೆಳೆಯುವಲ್ಲಿ ವ್ಯಾಪಾರಿಗಳು ಹೊಸತನವನ್ನು ಕಂಡುಕೊಳ್ಳಬೇಕಿದೆ. ಪುಸ್ತಕದ ಶೀರ್ಷಿಕೆಯಷ್ಟೇ ಅಲ್ಲದೇ, ಅದರೊಳಗಿನ ವಸ್ತು-ವಿಷಯಗಳ ವಿಶೇಷತೆಗಳ ಒಂದಷ್ಟು ಮಾಹಿತಿ ಇದ್ದರೆ ಓದುಗನನನ್ನು ಮುಟ್ಟಬಹುದೆಂಬ ಅರಿವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಮತಿ ಲಕ್ಷ್ಮೀ ನಿರೂಪಿಸಿ ವಂದಿಸಿದರು. ಉತ್ಥಾನ ಮಾಸಪತ್ರಿಕೆಯ ಗೌರವ ಸಮಪಾದಕ, ಸಾಹಿತಿ, ನಾಡೋಜ ಎಸ್.ಆರ್. ರಾಮಸ್ವಾಮಿ, ಹಿರಿಯ ಸಾಹಿತಿ, ಲೇಖಕ ಕೊ.ಶ್ರೀ. ನಾಗರಾಜ, ಲೇಖಕ, ಶ್ರೀ ಅಜ್ಜಂಪುರ ಮಂಜುನಾಥ್, ರಾಷ್ಟ್ರೋತ್ಥಾನ ಪರಿಷತ್ತಿನ ಖಜಾಂಜಿ, ಶ್ರೀ ನಾರಾಯಣ ಕೆ.ಎಸ್, ರಾಷ್ಟ್ರೋತ್ಥಾನ ಸಾಹಿತ್ಯದ ಶ್ರೀ ವಿಘ್ನೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಒಂದು ತಿಂಗಳ ಕಾಲ ನಡೆದ ಕನ್ನಡ ಪುಸ್ತಕ ಹಬ್ಬ 300ಕ್ಕೂ ಹೆಚ್ಚಿನ ರಾಷ್ಟ್ರೋತ್ಥಾನ ಪ್ರಕಟಣೆಗಳೇ ಅಲ್ಲದೇ ಇತರ ಪ್ರಕಾಶಕರ ಹಲವು ಕೃತಿಗಳಿಂದ ದಿನನಿತ್ಯ ಅಸಂಖ್ಯ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಶಾಲಾ ಕಾಲೇಜುಗಳು, ಗ್ರಂಥಾಲಯಗಳ ಪ್ರತಿನಿಧಿಗಳು ಭೇಟಿ ನೀಡಿ ಪುಸ್ತಕಗಳನ್ನು ಕೊಂಡುಕೊಂಡಿರುವುದು ಪುಸ್ತಕ ಓದಿನ ಭರವಸೆಯ ಫಲಕಗಳಾಗಿ ಉಲ್ಲೇಖನೀಯ ಎಂಬ ಅಂಶಗಳು ವ್ಯಕ್ತಗೊಂಡವು.
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#RashtrotthanaParishatBengaluru#RashtrotthanaYouTube#RashtrotthanaChannel#KannadaPustakaHabba2022#KannadaPustakaHabba#RashtrotthanaSahitya#BookFair#50Discount#BookFairBengaluru#vireshanand







