Call Us Now
+91 94482 84602
Email Us
info@rashtrotthana.org

ರಾಷ್ಟ್ರತಪಸ್ವಿ ಶ್ರೀಗುರೂಜಿ ಕೃತಿ ಲೋಕಾರ್ಪಣೆಗೊಂಡಿತು

ಬೆಂಗಳೂರು, ಜೂನ್ 11: ಇಲ್ಲಿನ ಜಯನಗರದಲ್ಲಿರುವ ಯುವಪಥದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ರಾಷ್ಟ್ರತಪಸ್ವಿ ಶ್ರೀಗುರೂಜಿ ಕೃತಿಯನ್ನು ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಮಠದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಶ್ರೀ ವಿಶ್ವೇಶ್ವರ ಭಟ್, ಲೇಖಕರು, ಅಂಕಣಕಾರರು, ಸಂಪಾದಕರು, ’ವಿಶ್ವವಾಣಿ’ ದಿನಪತ್ರಿಕೆ; ಶ್ರೀ ಸು. ರಾಮಣ್ಣ, ಜ್ಯೇಷ್ಠ ಪ್ರಚಾರಕರು, ರಾ.ಸ್ವ.ಸಂಘ; ಕೃತಿಯ ಅನುವಾದಕರಾದ ಶ್ರೀ ಚಂದ್ರಶೇಖರ ಭಂಡಾರಿಯವರು; ರಾಷ್ಟ್ರೋತ್ಥಾಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್ ಹಾಗೂ ರಾ.ಸ್ವ. ಸಂಘದ ಅನೇಕ ಹಿರಿಯರು ಉಪಸ್ಥಿತರಿದ್ದರು.
ಪುಸ್ತಕದ ಬಗ್ಗೆ ಮಾತನಾಡುತ್ತಾ ಶ್ರೀ ಸು. ರಾಮಣ್ಣನವರು, ಈ ಪುಸ್ತಕದ ಲೋಕಾರ್ಪಣೆ, ಕೃತಿಯ ವಸ್ತುವಾದ ಶ್ರೀಗುರೂಜಿ, ಮೂಲ ಲೇಖಕರಾದ ಶ್ರೀ ರಂಗಾ ಹರಿಯವರು ಹಾಗೂ ಅನುವಾದಕರಾದ ಶ್ರೀ ಚಂದ್ರಶೇಖರ ಭಂಡಾರಿಯವರು, ಈ ಮೂವರು ಪೂಜ್ಯರ ಸಂಗಮ ಎಂದು ಕೊಂಡಾಡಿದರು. ಸಂಘವು ವ್ಯಕ್ತಿನಿಷ್ಠವಾಗಿರದೇ ಧ್ಯೇಯನಿಷ್ಠವಾಗಿರಬೇಕು ಎಂಬ ಆಶಯದೊಂದಿಗೆ ಗುರೂಜಿಯವರು ತಮ್ಮ ಜೀವಿತದ ಕೊನೆಯವರೆವಿಗೂ ಅವಿರತವಾಗಿ ಶ್ರಮಿಸಿದ್ದನ್ನು ಸ್ಮರಿಸಿದರು. ಗುರೂಜಿಯವರ ಸ್ಥಿತಪ್ರಜ್ಞತೆ ಹಾಗೂ ಸಮಾಧಾನದ ವ್ಯವಹಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ವಿಶ್ವೇಶ್ವರ ಭಟ್ಟರು ವೈಚಾರಿಕ ಗಟ್ಟಿತನವಿರುವ ಸಂಘದಂತಹ ಸಂಸ್ಥೆಗಳು ನೂರ‍್ಕಾಲ ಬಾಳುವ ಶಕ್ತಿಯನ್ನು ಹೊಂದಿರುತ್ತವೆ ಹಾಗೂ ಇದೊಂದು ಟೈಂ ಟೆಸ್ಟೆಡ್ ಮಾದರಿ ಎಂದರು. ಗುರೂಜಿಯವರ ಸಂದೇಶಗಳು ಇಂದಿಗೂ ಪ್ರಸ್ತುತವೆಂದ ಅವರು ಲೋಕಾರ್ಪಿತ ಪುಸ್ತಕದಲ್ಲಿ ಅದು ಚೆನ್ನಾಗಿ ನಿರೂಪಿಸಲ್ಪಟ್ಟಿದೆ ಎಂದರಲ್ಲದೇ, ಹೊಸ ಸವಾಲುಗಳಿಗೆ ತೆರೆದುಕೊಂಡಲ್ಲಿ ಸಂಘವು ಇನ್ನೂ ದೊಡ್ಡ ಸ್ತರದಲ್ಲಿ ಬೆಳೆಯುವ ಸಾಧ್ಯತೆಯ ಬಗೆಗೆ ಮಾತನಾಡಿದರು.
ಕೃತಿ ಲೋಕಾರ್ಪಣೆ ಮಾಡಿದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಗುರೂಜಿ ಹಾಗೂ ಸಂಘದ ಬಗೆಗೆ ಈ ಕೃತಿಯು ಅಧಿಕೃತಿ ಮಾಹಿತಿಯನ್ನು ಒದಗಿಸುವಲ್ಲಿ ಸಫಲವಾಗಿದ್ದು, ಇದು ಸ್ವತಃ ತಮ್ಮ ಅನುಭವಕ್ಕೂ ಬರುತ್ತಿದೆ ಎಂದು ಹೇಳಿದರು.
ಹಾಗೂ ಕೃತಿಯ ಅನುವಾದಕರಾದ ಶ್ರೀ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು.