ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಚಿತ್ರದುರ್ಗ, ಮಾರ್ಚ್ 18: ಇಲ್ಲಿನ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶಾರದಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯಾದ ವೈಭವಿಯವರು ಶಾರದಾ ಪೂಜೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ವಸಂತ ಪಂಚಮಿಯನ್ನು ಶಾರದಾದೇವಿ ಹುಟ್ಟಿದ ದಿನವನ್ನಾಗಿ ಆಚರಿಸುತ್ತೇವೆ. ಶಾರದೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಸರಸ್ವತೀ, ಭಾರತೀ, ವೇದಮಾತಾ, ವೀಣಾಪಾಣೀ, ಬ್ರಾಹ್ಮೀ, ವಾಗೀಶ್ವರೀ ಹೀಗೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸರಸ್ವತೀ ದೇವಿಯ ಪ್ರಸ್ತಾವನೆ ನಮಗೆ ಮೊದಲು ಋಗ್ವೇದದಲ್ಲಿ ಕಂಡುಬರುತ್ತದೆ. ಸರಸ್ವತಿ ವೇದಗಳಿಗೂ ಹಾಗೂ ವಿಜ್ಞಾನಕ್ಕೂ ಅಧಿದೇವತೆಯೆಂದು ಹಲವು ಶಾಸ್ತ್ರ ಗ್ರಂಥಗಳಲ್ಲಿ ವರ್ಣಿತವಾಗಿದೆ. ಸರಸ್ವತೀ ಎಂದರೆ ಸೊಗಸಾದ ನೀರಿನ ಪ್ರವಾಹ ಎಂದರ್ಥ.
ಪುರಾಣಗಳ ಪ್ರಕಾರ ಸರಸ್ವತೀ ಬ್ರಹ್ಮನ ಮೊದಲ ಸೃಷ್ಟಿ ಎಂದು ಉಲ್ಲೇಖಿಸಲಾಗಿದೆ. ಬ್ರಹ್ಮನನ್ನು ಸೃಷ್ಟಿಕರ್ತ ಎಂದು ಕರೆಯುತ್ತಾರೆ. ಹಾಗೆಯೇ ಸೃಷ್ಟಿಕರ್ತನಿಗೆ ಬುದ್ಧಿವಂತಿಕೆ ಬೇಕು. ಆ ಬುದ್ಧಿವಂತಿಕೆಯೇ ಸರಸ್ವತೀ. ಶಾರದಾದೇವಿ ಸರಸ್ವತಿಯ ಮತ್ತೊಂದು ರೂಪ. ಶಾರದೆಯು ಆದಿಶಂಕರಾಚಾರ್ಯರಿಂದ ಪೂಜಿಸಲ್ಪಟ್ಟಿದ್ದಳು ಎಂದು ಹೇಳಲಾಗುತ್ತದೆ. ಸರಸ್ವತಿಯನ್ನು ವೇದಗಳ ಮಾತೆ, ಸ್ವರಗಳ ಮಾತೆ, ಜ್ಞಾನ ಮಾತೆ ಎಂದು ಕರೆಯುತ್ತಾರೆ.
ಸರಸ್ವತಿಯು ಭಾವಚಿತ್ರಗಳಲ್ಲಿ ಹಂಸದ ಮೇಲೆ ಆಸೀನರಳಾಗಿರುವುದನ್ನು ನೋಡುತ್ತೇವೆ. ಹಂಸ, ಜ್ಞಾನದ ಸಂಕೇತ. ನವಿಲು, ಕಲೆ, ನೃತ್ಯ-ಸಂಗೀತ, ಸೌಂದರ್ಯದ ಸಂಕೇತ. ಇನ್ನು ಸರಸ್ವತಿಯ ಬಿಳಿಸೀರೆ, ಶಾಂತಿ, ಚಂಪಹೂ, ಸ್ವಚ್ಛತೆ ಹಾಗೂ ಪಾವಿತ್ರ್ಯದ ಪ್ರತೀಕವಾಗಿದೆ. ಎಲ್ಲಿ ಸ್ವಚ್ಛತೆ ಹಾಗೂ ಪಾವಿತ್ರ್ಯ ಇರುವುದೋ, ಅಲ್ಲಿ ಜ್ಞಾನದ ಬೆಳವಣಿಗೆ ಆಗುತ್ತದೆ. ಸರಸ್ವತಿಯ ಕೈಯಲ್ಲಿರುವ ವೀಣೆ ಅಧ್ಯಾತ್ಮ ಧರ್ಮ ಮತ್ತು ಚೇತನ ಜ್ಞಾನ ಸಂಗೀತದ ಪ್ರತೀಕವಾಗಿದೆ .
ವೀಣೆಯಿಂದ ಹೂರಹೊಮ್ಮುವ ಸಂಗೀತ ಅಂಧಕಾರವನ್ನು ದೂರಮಾಡಿ, ಬೆಳಕಿನಡೆಗೆ ದಾರಿ ತೋರುತ್ತದೆ ಹಾಗೂ ವೀಣೆಯ ನಾದ ಸ್ತ್ರೀಶಕ್ತಿಯ ಪ್ರತೀಕ ಎನ್ನುತ್ತಾರೆ. ವೀಣೆಯಲ್ಲಿ ದೇವಾನುದೇವತೆಗಳು ನೆಲಸಿರುತ್ತಾರೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಸರಸ್ವತಿಯ ನಾಲ್ಕು ಭುಜಗಳು, ಕೈಗಳು ಸನಾತನ ಧರ್ಮದಲ್ಲಿ ನಾಲ್ಕು ವೇದಗಳ ಪ್ರತೀಕವೆಂದು ನಂಬಲಾಗಿದೆ. ಸರಸ್ವತಿ ಕೈಯಲ್ಲಿರುವ ವೀಣೆ, ಪುಸ್ತಕ ಸತ್ಯದ ಮಹತ್ವದ ದರ್ಶನ ಮಾಡಿಸುತ್ತದೆ. ಕೈಯಲ್ಲಿರುವ ಜಪಮಾಲೆ ಇದು ಮನಸ್ಸಿನ ಏಕಾಗ್ರತೆ ಹಾಗೂ ಜ್ಞಾನದ ಪ್ರತೀಕವಾಗಿದೆ. ಸರಸ್ವತಿ ಕಮಲದ ಮೇಲೆ ಆಸೀನಳಾಗಿದ್ದಾಳೆ. ಕಮಲ ಹೇಗೆ ಕೆಸರಿನಲ್ಲಿ ಹುಟ್ಟಿದರೂ, ಕೆಸರಿನಲ್ಲಿ ಅರಳಿ ನಿಂತರೂ ಕೆಸರನ್ನು ಮೈಗೆ ಅಂಟಿಸಿಕೊಳ್ಳದೇ ತನ್ನ ಸೌಂದರ್ಯವನ್ನು ಬಿಂಬಿಸುತ್ತದೋ ಹಾಗೆಯೇ ಮನುಷ್ಯರು ಸಹ ದೈನಂದಿನ ಜೀವನದ ಜಂಜಾಟಗಳ°è ಇದ್ದರೂ ಸಹ ಅದರಲ್ಲಿ ಮುಳುಗದೇ ತಮ್ಮ ತಮ್ಮ ಸತ್ವವನ್ನು ಕಾಪಾಡಿಕೊಳ್ಳಬೇಕು, ದುಶ್ಚಟಗಳಿಂದ ಮುಕ್ತರಾಗಬೇಕೆಂದು ನಮಗೆ ತಿಳಿಸುತ್ತದೆ. ಅಂಧಕಾರದಿಂದ ಮನುಷ್ಯನನ್ನು ಬೆಳಕಿನಡೆಗೆ ಅಥವಾ ಸುಧಾರಣೆ ತರಲು ಮಾತೆ ಸರಸ್ವತಿ ಆಶೀರ್ವಾದ ಬಹಳ ಮುಖ್ಯ. ಸರಸ್ವತಿಯನ್ನು ಆರಾಧಿಸುವುದು ಜ್ಞಾನವೃದ್ಧಿಗೋಸ್ಕರ. ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಸರಸ್ವತಿ ತಾಯಿಯ ಬಗ್ಗೆ ಒಂದು ಮಾತಿದೆ, ದೇವಿ, ಕಲಿಯದೇ ಒಲಿಯುವುದಿಲ್ಲ. ನಿರಂತರ ಪ್ರಯತ್ನ ಇದ್ದರೆ ಮಾತ್ರ ಸಾಧ್ಯ ಎಂದು ಹೇಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳೆಲ್ಲರೂ ಈಗಿನಿಂದಲೇ ತಮ್ಮ ಪರೀಕ್ಷಾ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ ತಿಳಿಸಿದರು.
ಪೂಜಾ ಕಾರ್ಯಕ್ರಮವನ್ನು ವೀಣಾ ಹಾಗೂ ಮುಕ್ತ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ಹನುಮೇಶ್ ಪದಕಿಯವರು, ಶಿಕ್ಷಕ ವೃಂದದವರು ಹಾಗೂ ಮಕ್ಕಳು ಭಾಗವಹಿಸಿದ್ದರು.
https://www.facebook.com/rashtrotthanaparishath/
https://rashtrotthana.org/