ಹೊಳೆಹೊನ್ನೂರು: ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಭಾರತೀಯ ಸಂಸ್ಕೃತಿ, ಪರ್ವಗಳ ಬಗೆಗಿನ ಅರಿವು ಮತ್ತು ಶಿಕ್ಷಣ ಅತ್ಯಗತ್ಯ. ಇದೇ ಸದುದ್ದೇಶದೊಂದಿಗೆ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಕಳೆದ ತಿಂಗಳು ಹಲವು ಹಬ್ಬಗಳನ್ನು ಆಚರಿಸಲಾಯಿತು.
ವಸಂತ ಪಂಚಮಿ ಪರ್ವದ ಪ್ರಯುಕ್ತ ಫೆಬ್ರವರಿ 5ರಂದು (ಮಾಘ, ಶುದ್ಧ ಪಂಚಮಿ) ಶಾಲೆಯಲ್ಲಿ 4 ವರ್ಷ 4 ತಿಂಗಳು ಹಾಗೂ 4 ದಿನ ತುಂಬಿದಂತಹ ಹೊಳೆಹೊನ್ನೂರಿನ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಷೋಡಶ ಸಂಸ್ಕಾರಗಳಲ್ಲಿ ಪ್ರಮುಖವಾದ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಕಾರ್ಯಕ್ರಮಕ್ಕೆ ಶಿವಮೊಗ್ಗದ ಶ್ರೀರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ಆಗಮಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಆಶೀರ್ವಚನ ನೆರವೇರಿಸಿದರು. ಒಟ್ಟು 114 ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಮಗುವಿನ ಬೆಳವಣಿಗೆ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಶಿಕ್ಷಕರು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಸ್ವಾಮೀಜೀ ತಿಳಿಸಿಕೊಟ್ಟರು.
ರಥಸಪ್ತಮಿಯನ್ನು ಫೆಬ್ರವರಿ 7ರಂದು ಶಾಲೆಯಲ್ಲಿ ಆಚರಿಸಲಾಯಿತು. ರಥಸಪ್ತಮಿ ಪರ್ವದ ಹಿನ್ನೆಲೆ ಹಾಗೂ ವೈಜ್ಞಾನಿಕ ಮಹತ್ತ್ವವನ್ನು ವೈಷ್ಣವಿ ಮಾತಾಜಿ ತಿಳಿಸಿಕೊಟ್ಟರು. ಅಶೋಕ್ ಗುರೂಜಿ ಮಕ್ಕಳು ಮತ್ತು ಶಿಕ್ಷಕರಿಗೆ ಸೂರ್ಯನಮಸ್ಕಾರ ಮಾಡಿಸಿದರು. ರಥಸಪ್ತಮಿಯ ಪ್ರಯುಕ್ತ ಎರಡು ವಾರಗಳ ಕಾಲ ಪ್ರತಿನಿತ್ಯ ಶಾಲೆಯಲ್ಲಿ ಮಕ್ಕಳಿಂದ 40 ನಿಮಿಷಗಳ ಕಾಲ ಸೂರ್ಯನಮಸ್ಕಾರವನ್ನು ಮಾಡಿಸಲಾಗುತ್ತಿದ್ದುದು ವಿಶೇಷ.
https://www.facebook.com/rashtrotthanaparishath/
https://rashtrotthana.org/