Call Us Now
+91 94482 84602
Email Us
info@rashtrotthana.org

Pustaka Habba: Lecture by Sri Du. Gu Laxman

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ಬಹುಆಯಾಮಗಳ ಕೊಡುಗೆಗಳ ಬಗೆಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ: ಶ್ರೀ ದು. ಗು. ಲಕ್ಷ್ಮಣ
ರಾಷ್ಟ್ರೋತ್ಥಾನ ಪುಸ್ತಕ ಹಬ್ಬದ ಉಪನ್ಯಾಸದಲ್ಲಿ ಅಭಿಮತ

ಬೆಂಗಳೂರು, ನ.6: ಭಾರತದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಇಂದಿನ ಸ್ವರೂಪ ರೂಪುಗೊಳ್ಳುವಲ್ಲಿ ಸಾವಿರಾರು ಅಪ್ರತಿಮ ವೀರ ಸಾಧಕರ ಸತತ ಪರಿಶ್ರಮ ಅಡಗಿದೆ. ಪ್ರಾಣ ನೆಲೆಗೊಳ್ಳಲು ವಾಯುವಿನ ಅಗತ್ಯವಿರುವಷ್ಟೇ, ಸ್ವಾತಂತ್ರ್ಯದ ಉಳಿಯುವಿಗೆ ಅದನ್ನು ನಮ್ಮಲ್ಲಿಗೆ ದಾಟಿಸಿದ ಮಹಾನ್ ಸಾಧಕರ ಬಲಿದಾನಗಳ ಸ್ಮರಣೆಯೂ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲಿ ಸಮಗ್ರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿದಿರಬೇಕಾದ ಅಗತ್ಯ ನಮಗಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಶ್ರೀ ದು. ಗು. ಲಕ್ಷ್ಮಣ ಅವರು ತಿಳಿಸಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ- 2022 ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಉಪನ್ಯಾಸ ಮಾಲಿಕೆಗಳ ಭಾಗವಾಗಿ ಇಂದು ಬೆಳಗ್ಗೆ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣಭಾರತ’ ಎಂಬ ವಿಷಯವಾಗಿ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮೊದಲು ರಾಷ್ಟ್ರದ ಉತ್ತರ ಭಾಗಗಳಲ್ಲಿ ಆರಂಭವಾದರೂ, ದಕ್ಷಿಣ ಭಾರತದ ಬಹುತೇಕ ಪ್ರದೇಶಗಳಲ್ಲೂ ಅದಕ್ಕೆ ಸಂವಾದಿಯಾಗಿ ಬಹು ಆಯಾಮಗಳ ಹೋರಾಟಗಳು ನಡೆದಿದ್ದವು. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕೈವಾಡಗಳ ಕಾರಣ ಇಲ್ಲಿಯ ಅನೇಕಾನೇಕ ಹೋರಾಟಗಳು ಇತಿಹಾಸದ ಪುಟಕಗಳಿಗೆ ಸೇರ್ಪಡೆಗೊಳಿಸುವಲ್ಲಿ ಲೋಪಗಳು ಸಂಭವಿಸಿದವು. ಸುಖಕರವಾದ ಜೈಲುವಾಸ ಅನುಭವಿಸಿದ್ದ ಗಾಂಧಿ, ನೆಹರೂಗಳಿಂದ ಹೊರತಾಗಿ ಪ್ರಾಣವನ್ನು ಒತ್ತೆಯಿಟ್ಟು ಬ್ರಿಟಿಷರಿಗೆ ಸದಾ ಕರಿನೆರಳಾಗಿದ್ದ ನೂರಾರು ಹೋರಾಟದ ಕಥೆಗಳು ದಕ್ಷಿಣ ಭಾರತದಲ್ಲಿ ನಡೆದಿದ್ದವು ಎಂದು ಅವರು ವಿಷದಪಡಿಸಿದರು. ಪ್ರಸಿದ್ದ ಇತಿಹಾಸ ಸಂಶೋಧಕ ವಿ. ಡಿ. ದಿವೇಕರ್ ಅವರ ನಿರಂತರ ಪರಿಶ್ರಮದಿಂದ ಇಲ್ಲಿಯ ಐತಿಹಾಸಿಕ ಘಟನಾವಳಿಗಳನ್ನು ಬೆಳಕಿಗೆ ತರುವಲ್ಲಿ ಸಾಧ್ಯವಾಗಿದೆ ಎಂದ ಅವರು, ಎಡಪಂಥೀಯ ಇತಿಹಾಸಕಾರರಿಂದಾದ ವಂಚನೆಗಳಿಗೆ ಕೊನೆಗಾಣಿಸಲು ಸಾಧ್ಯವಾಗಿದೆ ಎಂದರು.

ಕಿತ್ತೂರಿನ ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೀಪೋಜಿ ರಾಣೆ, ಉಳ್ಳಾದ ಅಬ್ಬಕ್ಕ, ತಮಿಳುನಾಡಿನ ರಾಮನಾಥಪುರದ ರಾಜಾ ಸೇತುಪತಿ, ಕೇರಳದ ವೇಲುತಂಬಿ ದಳವನ್ ಸಹಿತ ವಿವಿಧ ರಾಜವಂಶಗಳು, ಆಂಧ್ರ, ಗೋವಾ, ಪಾಂಡಿಚೇರಿಗಳ ವಿವಿಧೆಡೆ ನಡೆದ ಹೋರಾಟಗಳು, ಬಲಿದಾನಿಗಳ ಸ್ಮರಣೆ ನಮಗೆ ಸ್ವಾತಂತ್ರ್ಯದ ಧ್ಯೇಯದೆಡೆಗೆ ಬಲ ನೀಡುತ್ತದೆ ಎಂದರು. ಅಂದು ಪತ್ರಿಕಾ ಮಾಧ್ಯಮವೂ ಹೋರಾಟದ ಅಂಗವಾಗಿ ಗಮನಾರ್ಹ ಕೊಡುಗೆ ನೀಡಿದ್ದವು. ವಿಶ್ವರೂಪ, ವೃತ್ತಾಂತಚಿಂತಾಮಣಿ, ದೇಶಾಭಿಮಾನಿ ಮೊದಲಾದ ಪತ್ರಿಕೆಗಳಲ್ಲದೇ ಸತ್ಯಾಗ್ರಹ ಕರಪತ್ರ, ಶಿರಸಿ-ಸಿದ್ದಾಪುರ ಕರಪತ್ರ, ಡಮರು, ಕಹಳೆ ಮೊದಲಾದ ಭೂಗತ ಪತ್ರಿಕೆಗಳು ರಾಜದ್ರೋಹವೇ ಧರ್ಮ, ಸ್ವಾತಂತ್ರ್ಯವೇ ಧೀರತೆ ಎಂಬ ಪರಿಕಲ್ಪನೆಗಳೊಂದಿಗೆ ಮಹತ್ತರ ಕೊಡುಗೆಗಳನ್ನು ಜನಮಾನಸೆಡೆಗೆ ಕೊಡಮಾಡಿದ್ದವು. ಹರಿಕಥಾ ಸಂಕೀರ್ತನೆಗಳ ಮೂಲಕವೂ ಅನೇಕಾನೇಕ ಕೀರ್ತನಕಾರರು ತಮ್ಮದೇ ಕೊಡುಗೆಗಳನ್ನು ನೀಡಿರುವರೆಂದು ಉದಾಹರಣೆ ಸಹಿತ ಅವರು ತಿಳಿಸಿದರು. ಗಳಗನಾಥ, ಸಿಂಪಿ ಲಿಂಗಣ್ಣರ ಅಕ್ಷರ ರೂಪದ ಕ್ರಾಂತಿಯನ್ನು ನೆನಪಿಸಿದ ಅವರು, ನಮ್ಮ ಸ್ವಾತಂತ್ರ್ಯ, ಸಾರ್ವಭೌಮತೆಯನ್ನು ಕಾಪಿಡುವಲ್ಲಿ ನಮ್ಮ ಪೂರ್ವಜರ ಸಮಗ್ರ ಹೋರಾಟಗಳ ಚಿತ್ರಣ ನಮಗಾಗದ ಹೊರತು ಇವುಗಳ ಸಂರಕ್ಷಣೆ, ಸಂವಿಧಾನದ ರಕ್ಷಣೆ ಅಸಾಧ್ಯ ಎಂದರು.

ಬರಹಗಾರ ಶ್ರೀ ಅಜ್ಜಂಪುರ ಮಂಜುನಾಥ್ ಅವರು ಶ್ರೀ ದು. ಗು. ಲಕ್ಷ್ಮಣ ಅವರನ್ನು ಅಭಿನಂದಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಶ್ರೀ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ವಂದಿಸಿದರು.

ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

ಅಂತರ್ಜಾಲ ಖರೀದಿಯ ಕೊಂಡಿ: https://www.sahityabooks.com/

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#KannadaPustakaHabba2022#KannadaPustakaHabba#RashtrotthanaSahitya#BookFair#50Discount#BookFairBengaluru#DuGuLaxman