Call Us Now
+91 94482 84602
Email Us
info@rashtrotthana.org

Sri Puttu Kulkarni’s Lecture @ Kannada Pustaka Habba

ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬದುಕುವುದು ಸುಂದರ ಬದುಕಿನ ಧ್ಯೇಯ ಎಂಬುದು ಮಹರ್ಷಿ ಅರವಿಂದರ ಸಂದೇಶ: ಶ್ರೀ ಪುಟ್ಟು ಕುಲಕರ್ಣಿ

ಬೆಂಗಳೂರು, ನ.6: ರಾಷ್ಟ್ರ ಪ್ರಕೃತಿಯಾದರೆ, ದೇಶ ಸಂಸ್ಕೃತಿ. ಮಹರ್ಷಿ ಶ್ರೀ ಅರವಿಂದರು ಇವೆರಡರ ಸಮ್ಮಿಲನದ ಭಾರತ ಕಟ್ಟಲು ಕನಸುಕಂಡವರು ಎಂದು ಅರಬಿಂದೋ ಸೊಸೈಟಿಯ ಅಖಿಲ ಭಾರತ ಪತ್ರಿಕೆಯ ಸಂಪಾದಕ ಶ್ರೀ ಪುಟ್ಟು ಕುಲಕರ್ಣಿ ಅಭಿಪ್ರಾಯಪಟ್ಟರು.

ಇಲ್ಲಿನ ಕೇಶವ ಶಿಲ್ಪದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ- 2022 ಕಾರ್ಯಕ್ರಮದ ಅಂಗವಾಗಿ ಈ ದಿನ ಸಂಜೆ ಆಯೋಜಿಸಿದ್ದ ‘ರಾಷ್ಟ್ರೀಯ ಸಾಹಿತ್ಯ, ಪತ್ರಿಕಾಕ್ಷೇತ್ರ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅರವಿಂದರ ಕೊಡುಗೆ’ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ವಸಾಹತಿಶಾಹಿಗಳ ಧೂರ್ತತೆ ಮತ್ತು ತಂತ್ರಜ್ಞಾನ ಯುಗದ ಆರಂಭ ಕಾಲದ ತಲ್ಲಣಗಳ ಕಾಲಘಟ್ಟದಲ್ಲಿ ಶ್ರೀ ಅರವಿಂದರು ಬದುಕಿದವರು. ಈ ನಿಟ್ಟಿನಲ್ಲಿ ಪರಂಪರೆಯ ಬೇರುಗಳ ಆಶ್ರಯದಲ್ಲಿ ಹೊಸ ವಿಕಾಸದ ಆಧ್ಯಾತ್ಮಿಕ ತಳಹದಿಯ ರಾಷ್ಟ್ರಕಟ್ಟುವ ಯೋಜನೆಯನ್ನು ಮುಂದಿಟ್ಟವರು ಅರವಿಂದರಾಗಿದ್ದರು ಎಂದು ವಿಶ್ಲೇಶಿಸಿದರು. ಮ್ಯಾಕ್ಸ್ ಮುಲ್ಲರಿನಿಂದ ಹಿಸುಕಲ್ಪಟ್ಟ ಭಾರತೀಯ ತತ್ವಾದರ್ಶಗಳನ್ನು ಮರಳಿ ನೆನಪಿಸುವಲ್ಲಿ ಅರವಿಂದರ ಪರಿಶ್ರಮ ಅಗಾಧವಾದುದು. ಧೀಶಕ್ತಿಯನ್ನು ಬೆಳಗಿಸುವ ಆಕಾಶ ತತ್ವದ ನೆರಳಲ್ಲಿ ಸತ್ಯದ ಸಾಕ್ಷಾತ್ಕಾರ, ತತ್ಪರಿಣಾಮವಾಗಿ ವ್ಯಕ್ತಿ ಶಕ್ತಿಯಾಗುವ ತತ್ವ ಪ್ರಣೀತರಾಗಿ ಜಗತ್ತಿಗೇ ಬೆರಗಾದವರು ಅರವಿಂದರಾಗಿದ್ದರು ಎಂದು ಅವರು ತಿಳಿಸಿದರು. ಸ್ವಾತಂತ್ರ್ಯೋತ್ತರ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಅರವಿಂದರ ಚಿಂತನೆ ಸೂಕ್ಷ್ಮದಲ್ಲಿ ಅಡಗಿದೆ ಎಂದ ಅವರು, ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬದುಕುವ ಮೂಲಕ ಸುಂದರ ರಾಷ್ಟ್ರ, ವ್ಯಕ್ತಿತ್ವ ಕಟ್ಟುವ ಅರವಿಂದರ ಆದರ್ಶಗಳು ಇದೀಗ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ಆರ್ಯಪತ್ರಿಕೆ, ಕರ್ಮಯೋಗಿ ಪತ್ರಿಕೆ, ಭವಾನಿ ಭಾರತಿ ಕೃತಿಗಳ ಮೂಲಕ ಬೌದ್ದಿಕ ಭಾರತ ನಿರ್ಮಾಣದಲ್ಲಿ ಹೊಸ ದಿಶೆಯನ್ನು ತೋರಿಸಿದವರು ಅರವಿಂದರು. ಅನುಭವ, ಅನುಭಾವ, ಅನುಭೂತಿಗಳ ವಿಜ್ಞಾನಮಯ ಕೋಶದ ದರ್ಶನ ಮಾನವ ಬದುಕಿನ ಪರಮ ಲಕ್ಷ್ಯವಾದಾಗ ಬದುಕು ಸಾರ್ಥಕವಾಗುತ್ತದೆ ಎಂಬ ಅರವಿಂದರ ಸಮಗ್ರ ಸಂದೇಶ ನಮ್ಮ ನೆಮ್ಮದಿಗೆ ಕಾರಣವಾಗುತ್ತದೆ ಎಂದು ಪುಟ್ಟು ಕುಲಕರ್ಣಿ ಅರವಿಂದರ ಸಮಗ್ರ ಚಿಂತನೆಗಳ ಹೊಳಹನ್ನು ತೆರೆದಿಟ್ಟರು.

ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಎಸ್. ಆರ್. ರಾಮಸ್ವಾಮಿ, ಬೇಂದ್ರೆ ಸಾಹಿತ್ಯ ಟ್ರಸ್ಟ್-ನ ಶ್ರೀ ರಾಘವೇಂದ್ರ ಬಿದುರಕುಂದ್ರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಲೇಖಕ ಶ್ರೀ ಮಂಜುನಾಥ ಅಜ್ಜಂಪುರ ಅವರು ಪುಟ್ಟು ಕುಲಕರ್ಣಿ ಅವರನ್ನು ಅಭಿನಂದಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.

ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

ಅಂತರ್ಜಾಲ ಖರೀದಿಯ ಕೊಂಡಿ: https://www.sahityabooks.com/

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#KannadaPustakaHabba2022#KannadaPustakaHabba#RashtrotthanaSahitya#BookFair#50Discount#BookFairBengaluru#PuttuKulkarni