• August 14, 2024
  • RP
  • 0

Golden celebration of Book, Ajeya: Youth should be led on the right path to build an awakened society: Dr. Babu Krishnamoorthy

ಅಜೇಯ ಸುವರ್ಣ ಸಂಭ್ರಮ: ಜಾಗೃತ ಸಮಾಜ ನಿರ್ಮಾಣದಲ್ಲಿ ಯುವ ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಸಬೇಕು: ಡಾ. ಬಾಬು ಕೃಷ್ಣಮೂರ್ತಿ

ಶಿವಮೊಗ್ಗ, ಆಗಸ್ಟ್ 12: ರಾಷ್ಟ್ರೋತ್ಥಾನ ಬಳಗವು ವಿಕಾಸ ಟ್ರಸ್ಟ್, ಅಭಾಸಾಪ ಹಾಗೂ ಸಂಸ್ಕಾರ ಭಾರತಿ ಇವರ ಸಹಯೋಗದಲ್ಲಿ ಈ ದಿನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಅಜೇಯ 50 ಹಾಗೂ ಅದಮ್ಯ 40ರ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಖ್ಯಾತ ಲೇಖಕ, ಪತ್ರಕರ್ತ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿದರು.

ವಿದೇಶೀ ಶಕ್ತಿಗಳು ಭಾರತದ ಸಂಸ್ಕೃತಿ, ಜೀವನಕ್ರಮಗಳನ್ನು ಬುಡಮೇಲುಗೊಳಿಸಲು ನಿರಂತರ ಪ್ರಯತ್ನಿಸುತ್ತಿದ್ದು, ಈ ಬಗೆಗಿನ ಜನಜಾಗೃತಿ ಅತ್ಯಗತ್ಯ. ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವಿರುದ್ದ ನಡೆಯುತ್ತಿರುವ ಸಾಂಸ್ಕೃತಿಕ ದಾಳಿಗಳನ್ನು ಹತ್ತಿಕ್ಕಲು ಅಕ್ಷರ ಕ್ರಾಂತಿಯ ಮೂಲಕ ಜಾಗೃತಗೊಳ್ಳಬೇಕಿದೆ ಎಂದು ಡಾ. ಬಾಬು ಕೃಷ್ಣಮೂರ್ತಿ ಹೇಳಿದರು.

ಇಂದಿನ ಸಮಾಜದ ಸ್ಥಿತಿಯಲ್ಲಿ ಚಂದ್ರಶೇಖರ ಆಜಾದ್ ಅವರಂತಹ ಕ್ಷಾತ್ರ ತೇಜಸ್ಸು ಪ್ರತಿಯೊಬ್ಬರಲ್ಲಿಯೂ ಬರಬೇಕಿದೆ ಎಂದರು. ದೇಶದ ಶಾಂತಿ, ಸಮೃದ್ದಿಯನ್ನು ಕೆಡವಲು ಅವಕಾಶ ನೀಡಬಾರದು. ಅಸ್ಥಿರತೆಯ ಕುತ್ಸಿತ ಮನೋವೃತ್ತಿಗೆ ಎದುರಾಗಿ ಸೆಟೆದುನಿಲ್ಲುವ ಮನೋವೃತ್ತಿ ಬೆಳೆಯಬೇಕು. ದೇಶದ ಸ್ವಾತಂತ್ರ್ಯಯೋಧರ ಜೀವನವನ್ನು ಪ್ರತಿಯೊಬ್ಬರೂ ತಿಳಿಯುವಂತಾಗಬೇಕು. ಆಗ ಮಾತ್ರ ದೇಶಭಕ್ತಿ ಪ್ರತಿಯೊಬ್ಬರಲ್ಲೂ ಬೆಳೆಯಲಿದೆ ಎಂದರು.

ಸಂಘದ ನಿರಂತರ ಪ್ರೇರಣೆಯೇ ನನ್ನ ಬರಹಗಳ ಯಶಸ್ಸಿನ ಪಯಣಕ್ಕೆ ಕಾರಣ. ಸಂಘದ ಅನುಸರಣೀಯ ಮಾರ್ಗದರ್ಶನದ ಪರಿಣಾಮವಾಗಿ ಅಜೇಯ, ಅದಮ್ಯ ಮೊದಲಾದ ಮಹತ್ವದ ಕೃತಿಗಳನ್ನು ನೀಡಲು ಸಾಧ್ಯವಾಗಿದೆ. ಅಜೇಯ ಕೃತಿಯ ಓದಿನಿಂದ ಪ್ರೇರಣೆಗೊಂಡು ಹಲವು ತಂದೆ ತಾಯಂದಿರು ಮಕ್ಕಳಿಗೆ ‘ಅಜೇಯ’ ಎಂದು ನಾಮಕರಣ ಮಾಡಿರುವುದೇ ದೊಡ್ಡ ಪುರಸ್ಕಾರ ಎಂದ ಅವರು, ಮುಂದೆಯೂ ಈ ಪುಸ್ತಕ ಸಮಾಜದ ಮೇಲೆ ಪ್ರಭಾವ ಬೀರಲಿ ಎಂದು ಆಶಿಸಿದರು.

ಆದರ್ಶ ತೋರುವ ಕೃತಿಗಳು: ಅಜೇಯ ಮತ್ತು ಅದಮ್ಯ ಕೃತಿಗಳನ್ನು ಕುರಿತು ಮಾತನಾಡಿದ ಕಾರ್ಕಳದ ಶ್ರೀ ಆದರ್ಶ ಗೋಖಲೆ, ಈ ಪುಸ್ತಕಗಳು ಜೀವನ ಮೌಲ್ಯವನ್ನು, ಬದುಕಿನ ಸತ್ತ್ವಗಳನ್ನು ಕಲಿಸುತ್ತವೆ. ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಅನಾವರಣಗೊಳಿಸುವ ಅದಮ್ಯ, ಅಜೇಯ ಕೃತಿಗಳು ಇಂದಿನ ಯುವ ಪೀಳಿಗೆಗೆ ಆದರ್ಶದ ದಾರಿ ತೋರುವ ಮಹತ್ವದ ಕೃತಿಗಳಾಗಿವೆ ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯದ ಹೋರಾಟಗಾರರಲ್ಲ ಎಂದು ಬಿಂಬಿಸುವ ಕುತಂತ್ರಗಳು ತೆರೆಮರೆಯಲ್ಲಿ ನಡೆದವು. ಕಮ್ಯುನಿಸ್ಟ್ ಚಿಂತನೆಯ ಸರ್ಕಾರಿ ಕೃಪಾಪೋಷಿತ ಚಿಂತನೆಗಳು ರಾರಾಜಿಸುತ್ತಿದ್ದ ಹೊತ್ತಿಗೆ ಅಜೇಯ ಕೃತಿ ಬಂದಿತ್ತೆಂದು ಅವರು ನೆನಪಿಸಿದರು. ಅಜೇಯ ಹೊರತರಲು ಬಾಬು ಕೃಷ್ಣಮೂರ್ತಿಯವರು ಪಟ್ಟಪಾಡು ಊಹಿಸಲು ಅಸಾಧ್ಯ. ಸ್ವಾತಂತ್ರ್ಯದ ಸಂದರ್ಭದಲ್ಲಿ ಬಂದ ಈ ಕೃತಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಕನ್ನಡ ಸಾಹಿತ್ಯ ಮಾತ್ರವಲ್ಲ, ವಿಶ್ವಸಾಹಿತ್ಯಕ್ಕೆ ಚಂದ್ರಶೇಖರ್ ಆಜಾದ್ ಹೋರಾಟದ ಬದುಕನ್ನು ಅಜೇಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.

ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ. ಪಿ. ಆರ್. ಸುಧೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಿವಮೊಗ್ಗ ಕ್ಷೇತ್ರದ ಶಾಸಕ ಶ್ರೀ ಎಸ್. ಎನ್. ಚನ್ನಬಸವಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಕಾಸ ಟ್ರಸ್ಟ್ ಅಧ್ಯಕ್ಷ ಶ್ರೀ ಬಿ. ಎ. ರಂಗನಾಥ್ ಹಾಗೂ ಸಂಘದ ಹಿರಿಯರಾದ ಶ್ರೀ ಸು. ರಾಮಣ್ಣ ಉಪಸ್ಥಿತರಿದ್ದರು.

https://www.sahityabooks.com/

#Rashtrotthana #RashtrotthanaParishat #RashtrotthanaSahitya #rashtrotthanabalaga #ajeya #Adamya #babukrishnamoorthy #ಬಾಬುಕೃಷ್ಣಮೂರ್ತಿ

Leave a Reply

Your email address will not be published. Required fields are marked *