1 ತಿಂಗಳ (ನ. 1 – ಡಿ. 3) ಕನ್ನಡ ಪುಸ್ತಕ ಹಬ್ಬದ ಸಮಾರೋಪ ಸಮಾರಂಭ
ಡಿಜಿಟಲ್ ಯುಗದಲ್ಲಿ ಪುಸ್ತಕ ಸಂಸ್ಕೃತಿಗೆ ತೊಡಕಾಗದು: ಡಾ. ಡಿ. ವಿ. ಪರಮಶಿವಮೂರ್ತಿ
ಬೆಂಗಳೂರು, ಡಿಸೆಂಬರ್ 3: ಮನುಷ್ಯ ನಾಗರಿಕತೆಯ ಅತ್ಯುತ್ತಮ ಚಟುವಟಿಕೆ, ಕ್ರಿಯಾತ್ಮಕತೆಯ ಚೋದಕ ರೂಪ ಬೌದ್ಧಿಕ ವಿಕಸನವಾಗಿದೆ. ಇಂತಹ ವಿಕಾಸಕ್ಕೆ ಮಾಹಿತಿ ದಾಖಲೀಕರಣ ರೂಪವಾಗಿ ಭಾಷೆ, ಲಿಪಿಗಳು ರೂಪುಗೊಂಡವು. ಪುಸ್ತಕಗಳನ್ನು ಓದುವ ಮೂಲಕ ಮಾಹಿತಿ ಅಥವಾ ಜ್ಞಾನವನ್ನು ಪಡೆಯಲು ಆಸಕ್ತಿ ಹೊಂದಿರುವ ಎಲ್ಲ ವಯಸ್ಸಿನ ಜನರಿಂದ ಪುಸ್ತಕಗಳು ಆಕರ್ಷಿತವಾಗುತ್ತವೆ. ಒಳ್ಳೆಯ ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರಂತೆ, ಅವು ಎಂದಿಗೂ ನಮ್ಮನ್ನು ಬಿಡುವುದಿಲ್ಲ ಅಥವಾ ಸುಳ್ಳು ಹೇಳುವುದಿಲ್ಲ, ಅವು ನಮ್ಮಿಂದ ಸ್ವಲ್ಪ ಸಮಯವನ್ನು ಮಾತ್ರ ಬಯಸುತ್ತವೆ ಮತ್ತು ನಮ್ಮಲ್ಲಿ ಹೆಚ್ಚಿನ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ತುಂಬುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದಲ್ಲಿ ಈ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಎಳವೆಯಲ್ಲೇ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬರುವಂತಹ ವಾತಾವರಣವನ್ನು ಪೋಷಕರು ಸೃಷ್ಟಿ ಮಾಡಬೇಕು ಎಂದವರು ತಿಳಿಸಿದರು. ಮೊದಲ ಲಿಪಿ ಎಂದು ಬ್ರಾಹ್ಮೀ ಹಾಗೂ ಕರೋಷ್ಟಿ ಎಂದು ಗುರುತಿಸಲ್ಪಟಿದೆ. ಆದರೆ ಸಂಡೂರಿ ದೇವಾಲಯದಲ್ಲಿ ಲಭಿಸಿದ ಶಂಕ ಲಿಪಿ ಇನ್ನೂ ಗುರುತಿಸಲಾಗದೇ ಉಳಿದುಕೊಂಡಿದೆ. ಈಗ ಡಿಜಿಟಲ್ ಮಾರುಕಟ್ಟೆಯು ಪುಸ್ತಕಗಳನ್ನು ಹಿಂದಿಕ್ಕಬಹುದೆಂಬ ಭಯ ಅನಗತ್ಯ. ಇದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರಸ್ತುತ ಕ್ಷಣ ಮಾತ್ರದಲ್ಲಿಯೇ ಪುಸ್ತಕವನ್ನು ಮುದ್ರಿಸುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ, ಆದರೆ ಹಿಂದಿನ ಕಾಲದಲ್ಲಿ ತಾಳೆಗರಿಯಲ್ಲಿ ಬರೆಯಬೇಕಾದರೆ ಚಿತ್ತಾಗದಂತೆ ಬರಿಯಬೇಕಾಗಿತ್ತು ಎಂದರು.
ತಾಳೆಗರಿ ಉಳಿಸಬೇಕು ಎನ್ನುವ ಪ್ರಜ್ಞೆ ಪೂರ್ವಿಕರಲ್ಲಿತ್ತು. ಆದರೆ ಅವರ ಕೈ ಮೀರಿ ನಾಶವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಮಠಗಳು ಸಂರಕ್ಷಿಸುವ ಜವಾಬ್ದಾರಿ ಹೊತ್ತಿದ್ದರು ಎಂದು ಹೇಳಿದರು.
ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಪುಸ್ತಕಗಳನ್ನು ನೀಡಬೇಕು, ಯಾಕೆಂದರೆ ಜ್ಞಾನಾರ್ಜನೆಗೆ ಗುರು ಹಾಗೂ ಪುಸ್ತಕಗಳಿರಬೇಕು. ಹಾಗಾಗಿ ಪುಸ್ತಕವನ್ನು ಮುಂದಿನ ಪೀಳಿಗೆಯವರಿಗೆ ಪಸರಿಸೋಣ ಎಂದು ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ, ಶ್ರೀ ಎಂ. ಪಿ. ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕವು ಭಾವ ಜಗತ್ತಿಗೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿದೆ, ಆದರೆ ಈಗ ನಾವು ಪುಸ್ತಕಗಳಿಗೆ ನೀಡುವ ಸಮಯವು ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಶುದ್ಧತೆಯನ್ನು ಉಳಿಸಿಕೊಳ್ಳುವ ಕೆಲಸವಾಗಬೇಕು, ಓದುವ ಹಾಗೂ ಬರೆಯುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಜೊತೆಗೆ ಕನ್ನಡದಲ್ಲಿ ಓದುವ ಹಾಗೂ ಬರೆಯುವ ಚಳುವಳಿ ಪ್ರಾರಂಭವಾಗಬೇಕು. ಆಗ ಸುಸ್ಥಿತಿಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಸಾಹಿತ್ಯ ಪರಿಚಾರಕ ಶ್ರೀ ಉಮೇಶ್ ದಾವಣಗೆರೆ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಸಾಹಿತ್ಯ ಪ್ರಚಾರ ಸವಾಲಿನದು. ಧೃತಿಗೆಡದೇ ಮುಂದೆ ಸಾಗಿದ್ದೆ. ಅದಕ್ಕೆ ಸಂಘದಿಂದ ಧೈರ್ಯ ತುಂಬಿದ್ದರು ಎಂದು ಅವರು ಸ್ಮರಿಸಿದರು. ಓದುಗರ ಸಂಖ್ಯೆ ಹೆಚ್ಚಿದೆ, ಅವರನ್ನು ಹುಡುಕಿಕೊಂಡು ಹೋಗಬೇಕು, ಆಗ ಕನ್ನಡ ಕನ್ನಡ ಪುಸ್ತಕಗಳು ಹೆಚ್ಚು ಪ್ರಸಾರವಾಗುತ್ತವೆಎಂದು ಹೇಳಿದರು.
ಪುಸ್ತಕ ಹಬ್ಬದ ಅಂಗವಾಗಿ ವಿವಿಧ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ನಡೆಸಲಾದ ಗೀತಗಾಯನ ಸ್ಪರ್ಧಾ ವಿಜೇತರಾದ ಭೂಮಿಕಾ ಎಸ್, ಆದಿತಿ ಆರ್ ವೈದ್ಯ, ಆದಿತ್ಯ ಶ್ರೀನಿಧಿ ಮತ್ತು ರಂಗೋಲಿ ಸ್ಪರ್ಧೆ ವಿಜೇತರಾದ ಹಂಸವೇಣಿ ಬಸವನಗುಡಿ, ಸುಮಾ ಕರ್ಮಾಕರ್ ಅವರಿಗೂ ಬಹುಮಾನ ನೀಡಲಾಯಿತು.
ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ, ಶ್ರೀ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉತ್ಥಾನ ಮಾಸಪತ್ರಿಕೆ ಗೌರವ ಸಂಪಾದಕರಾದ ಡಾ. ಎಸ್. ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್‍ನ ಕೋಶಾಧ್ಯಕ್ಷರಾದ ಶ‍್ರೀ ಕೆ. ಎಸ್. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಸಾಹಿತ್ಯ
#93/1, ‘ಕೇಶವ ಶಿಲ್ಪ’, ಕೆಂಪೇಗೌಡ ನಗರ, ಬೆಂಗಳೂರು – 560 004
ದೂ: 080 2661 2730
ಇಮೇಲ್: sahitya@rashtrotthana.org
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #Valedictory
Project Info
- Category: News & Media
- Location: Keshava Shilpa, KG Nagar, Bengaluru
- Completed Date: 3 Dec 2023