Bengaluru, Nov 1: One Month Kannada Pustaka Habba was inaugurated herein Keshavashilpa, KG Nagar.
ಬೆಂಗಳೂರು, ನ.1: ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬದ ಉದ್ಘಾಟನೆಯನ್ನು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಮಾಡಲಾಯಿತು.
ಸರಿಗನ್ನಡ ಬಳಸುವ-ಬೆಳೆಸುವ ರಾಷ್ಟ್ರೋತ್ಥಾನದ ಸಾಹಿತ್ಯ ಕೈಂಕರ್ಯ ಸ್ತುತ್ಯರ್ಹ: ನಟ, ನಿರ್ದೇಶಕ ಶ್ರೀ ಸುಚೇಂದ್ರಪ್ರಸಾದ್: ಕನ್ನಡ ಪುಸ್ತಕ ಹಬ್ಬ ಉದ್ಘಾಟಿಸಿ ಅಭಿಮತ
ಸಾಮರಸ್ಯದ ಜೊತೆಗೆ ಸಮಂಜಸವಾದ ಮೌಲ್ಯಯುತ ಸಾಹಿತ್ಯ ಬರಹಗಳಿಗೆ ಸದಾ ಜನಮನ್ನಣೆ ಇದೆ. ಉತ್ಕೃಷ್ಟ ಸಾಹಿತ್ಯ ಬರಹಗಳು ಸಮಾಜದ ದಾರಿದೀಪಕವಾಗಿ ಸದಭಿಮಾನೀ ವ್ಯಕ್ತಿತ್ವ ರೂಪಣೆಗೆ ಬೆಂಬಲ ನೀಡುತ್ತದೆ ಎಂದು ಚಲನಚಿತ್ರ ನಟ-ನಿರ್ದೇಶಕ, ‘ಸಂಸ್ಕಾರಭಾರತಿ’ಯ ಪ್ರಾಂತ ಅಧ್ಯಕ್ಷ ಶ್ರೀ ಸುಚೇಂದ್ರಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಯನಶೀಲರಾಗಲು ಅನ್ವೇಶಿಗಳಾಗಬೇಕು. ಅರಿವಿನ ವಿಸ್ತಾರತೆಗೆ ನಾವು ಓದುವ ಸಾಹಿತ್ಯ ಬರಹಗಳು ಹಿತಕರವಾಗಿರಬೇಕು. ಇಂದು ಸರಿಗನ್ನಡವನ್ನು ಬಳಸುವ-ಬೆಳೆಸುವ ತುರ್ತು ಇದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಬಹು ಆಯಾಮದ ಚಟುವಟಿಕೆಗಳೆಲ್ಲ ಅನುಕರಣೆ-ಅನುಸರಣೀಯವಾದುದು. ಯುವ ಸಮೂಹವನ್ನು ಸತ್ಪಥದಲ್ಲಿ ಮುನ್ನಡೆಸುವ ಸಮಗ್ರ ಚಿಂತನೆಗಳ ಬರಹಗಳನ್ನು ಓದುಗರಿಗೆ ತಲುಪಿಸುವ ಕೈಂಕರ್ಯ ಸ್ತುತ್ಯರ್ಹವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು.
ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಹೊಸ ತಲೆಮಾರಿನ ಮಕ್ಕಳಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸುವಲ್ಲಿ ಪ್ರಯತ್ನಗಳು ಇನ್ನಷ್ಟು ಬೆಳೆಯಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪರಂಪರೆಯ ಅರಿವನ್ನು ಪಸರಿಸುವ ಸವಾಲುಗಳ ಮಧ್ಯೆ ಇಂತಹ ಪುಸ್ತಕೋತ್ಸವಗಳು ಭರವಸೆಯ ಬೆಳಕಾಗಿವೆ ಎಂದರು.
ಸಮಾರಂಭದ ಮತ್ತೋರ್ವ ಮುಖ್ಯ ಅತಿಥಿ, ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ-ಸಂಯೋಜಕರಾದ ಶ್ರೀ ರಘುನಂದನ್ ಅವರು ಮಾತನಾಡಿ, ನಾವು ಓದಿದ, ನಮಗೆ ಪ್ರೇರಣೆ ನೀಡಿದ ಉತ್ತಮ ಪುಸ್ತಕಗಳನ್ನು ಮತ್ತೊಬ್ಬರಿಗೆ ಹೇಳುವ ಕೆಲಸ ನಮ್ಮಿಂದಾಗಬೇಕು. ಇಷ್ಟಪಟ್ಟು ಓದುವ ಕೃತಿ, ವ್ಯಕ್ತಿ, ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. ರಾಷ್ಟ್ರೋತ್ಥಾನದ ಪ್ರಕಟನೆಗಳಾದ ಭಾರತ-ಭಾರತಿ, ಅಜೇಯ ಮುಂತಾದ ಮೌಲ್ಯಯುತ ಕೃತಿಗಳು ವೈಚಾರಿಕತೆಯಿಂದೊಡಗೂಡಿ ಸಾಹಿತ್ಯ ಪ್ರಪಂಚಕ್ಕೆ ಮಹತ್ತರವಾದ ಕೊಡುಗೆ ನೀಡಿದೆ. ಬರಹ ಸಣ್ಣದಾದರೂ ಹರಿವು ನಿರಂತರವಾಗಿರಲಿ ಎಂದು ಕರೆಕೊಟ್ಟರು.
ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಅಭ್ಯಾಗತರನ್ನು ಅಭಿನಂದಿಸಿದರು. ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕ, ಸಾಹಿತಿ, ಬರಹಗಾರ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್‍ನ ಕೋಶಾಧ್ಯಕ್ಷರಾದ ಶ್ರೀ ಕೆ. ಎಸ್. ನಾರಾಯಣ, ಲೇಖಕರಾದ ಶ್ರೀ ವಿ. ಪಿ. ಪ್ರೇಮಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ, ಒಟ್ಟು 33 ದಿನಗಳ ಕಾಲ ಕೇಶವಶಿಲ್ಪ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 8ರ ವರೆಗೆ ಪುಸ್ತಕೋತ್ಸವ ನಡೆಯಲಿದ್ದು, ಉಪನ್ಯಾಸ, ಸಂವಾದ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ಆಯೋಜಿಸಲಾಗಿದೆ ಹಾಗೂ ಪುಸ್ತಕಗಳಿಗೆ 50% ವರೆಗೂ ರಿಯಾಯಿತಿಯಿದೆ.
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #KannadaRajyotsava #KarnatakaRajyotsava
Project Info
- Category: News & Media
- Location: Keshavashilpa, KG Nagar, Bengaluru
- Completed Date: 1st Nov 2023