1 ತಿಂಗಳ (ನ. 1 – ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿ
ನವೆಂಬರ್ 11: ವಿಶೇಷ ಉಪನ್ಯಾಸ – ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು
ಬೆಂಗಳೂರು, ನವೆಂಬರ್ 11: ತನ್ನ ದೇಶದ ಸುತ್ತಲೂ ಸದಾ ಶತ್ರುಪಾಳಯದಿಂದ ಆವೃತವಾಗಿರುವ ಪುಟ್ಟ ದೇಶವಾದ ಇಸ್ರೇಲ್ ತನ್ನ ದೇಶಪ್ರೇಮ, ಸ್ವಾಭಿಮಾನದ ಮೂಲಕ ಎಂದಿಗೂ ಕುತೂಹಲಪೂರಿತವಾದ ಮಾದರಿ ದೇಶ. ತನ್ನ ದೇಶಕ್ಕೆ ಅಪಾಯವೊದಗಿದಾಗ ಜಗತ್ತಿನ ಯಾವುದೇ ಮೂಲೆಯಲ್ಲೇ ಇರಲಿ; ಅಲ್ಲಿರುವ ಯಹೂದಿಗಳು ತಮ್ಮ ದೇಶಕ್ಕಾಗಿ ತುಡಿಯುತ್ತಾರೆ. ಪ್ರಾಣಾರ್ಪಣೆಗೆ ಮುನ್ನುಗ್ಗುವ ಛಾತಿ ಪ್ರದರ್ಶಿಸುತ್ತಾರೆ. ದೃಢ ನಿಶ್ಚಯದ ಮೂಲಕ ಲಕ್ಷ್ಯ ಪ್ರಾಪ್ತಿಗೆ ಹಿಂದೇಟು ಹಾಕುವವರಲ್ಲ ಎಂದು ಖ್ಯಾತ ಪತ್ರಕರ್ತ, ಏಷ್ಯಾನೆಟ್-ಸುವರ್ಣ ವಾಹಿನಿಯ ಪ್ರಧಾನ ಸಂಪಾದಕ, ಶ್ರೀ ಅಜಿತ್ ಹನುಮಕ್ಕನರ್ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಈ ದಿನ ಆಯೋಜಿಸಿದ್ದ ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.
ಸಂಕೀರ್ಣ ಭೌಗೋಳಿಕತೆ, ಸಾಂಸ್ಕೃತಿಕ ಹಿನ್ನೆಲೆಯ ಇಸ್ರೇಲ್ ಸದಾ ದಾಳಿಗಳಿಂದ ನಲುಗುತ್ತಿದ್ದರೂ ಇನ್ನೂ ಅಪೂರ್ವ ಸಾರ್ವಭೌಮತೆಯನ್ನು ಕಾಪಿಡುವ ಮೂಲಕ ಅಸ್ತಿತ್ತ್ವದಲ್ಲಿದೆ ಎನ್ನುವುದೇ ಪವಾಡ. ಮಧ್ಯ ಏಷ್ಯಾದ ಪುಟ್ಟ ದೇಶವಾದ ಇಸ್ರೇಲ್, ಭಾರತ ಸ್ವಾತಂತ್ರ್ಯ ಪಡೆದ ತರುವಾಯ ಅಸ್ತಿತ್ವ ಪಡೆದು ದಶಕಗಳ ಅಂತರದಲ್ಲಿ ಜಗತ್ತಿನಲ್ಲೇ ಅತಿ ಬಲಾಢ್ಯ ದೇಶವಾಗಿ ಹೊರಹೊಮ್ಮಿದ್ದು ಅದರ ದಿಟ್ಟತನದ ಸಂಕೇತ. ಹಮಾಸ್ ಅ. 7ರಂದು ನಡೆಸಿದ ದಾಳಿ ಇಸ್ರೇಲ್ನ ಗುಪ್ತಚರ ದಳದ ಸೋಲೆಂದು ಬಿಂಬಿಸಬೇಕಿಲ್ಲ. ಅದರ ಮಾನವೀಯತೆಗೆ ಹಮಾಸ್ ಎಸಗಿದ ಮೋಸದ ವಂಚಕತನ ಕಾರಣ ಎಂದು ಅವರು ವಿಶ್ಲೇಶಿಸಿದರು. ಇಸ್ರೇಲಿಗಳ ಪಾರಂಪರಿಕ ಆಚರಣೆ ‘ಶಬಾತ್’ನ ಮರೆಯಲ್ಲಿ ಹಮಾಸ್ ಎಸಗಿದ ಕ್ರೂರತೆ ಮೃಗೀಯ ಮತಾಂಧತೆಯ ಪರಾಕಾಷ್ಠೆಯಾಗಿತ್ತು. ಇದಕ್ಕೆ ಪ್ರತಿಯಾಗಿ ದಿಟ್ಟ ಇಸ್ರೇಲ್ ಪ್ರತಿನಿತ್ಯ ಉತ್ತರಿಸುತ್ತಿದೆ ಎಂದರು.
ಇಸ್ರೇಲ್ ನ ಇತಿಹಾಸದತ್ತ ಬೆಳಕುಚೆಲ್ಲಿದ ಅವರು, ರಾಷ್ಟ್ರಭಕ್ತಿ, ಸವಾಲುಗಳನ್ನು ಎದುರಿಸುವಲ್ಲಿಯ ಸನ್ನದ್ದತೆಗಳ ಬಗ್ಗೆ ವಿಶ್ಲೇಶಿಸುತ್ತಾ, ಅಲ್ಲಿಯ ಪ್ರತಿಪಕ್ಷದ ನಾಯಕರೂ ರಾಷ್ಟ್ರರಕ್ಷಣೆಯ ವಿಷಯಗಳು ಬಂದಾಗ ಆಡಳಿತಪಕ್ಷದೊಂದಿಗೆ ಜೊತೆಯಾಗಿ ಬೆಂಬಲವಾಗಿರುತ್ತಾರೆ. ಪ್ರಜ್ಞಾವಂತ ನಾಯಕರ ಆಯ್ಕೆ ರಾಷ್ಟ್ರವೊಂದರ ಬೆಳವಣಿಗೆ, ಸವಾಲುಗಳ ನಿವಾರಣೆಗಳಲ್ಲಿ ಹೇಗೆ ಪ್ರಭಾವಶಾಲಿ ಎಂದು ವಿವರಿಸಿದರು. ಆಯ್ಕೆಗಳ ವೇಳೆ ಮೈಮೇಲಿನ ಪ್ರಜ್ಞೆ ಜಾಗೃತವಾಗಿರಬೇಕೆಂದು ಕರೆನೀಡಿದರು.
ಹಮಾಸ್ ದಾಳಿ ಗಾಜಾ ದೇಶಕ್ಕಾಗಿ ಅಲ್ಲ. ಅದು ಮತಾಂಧತೆಯ ಪರಾಕಾಷ್ಠೆಯಾಗಿ ಜಗತ್ತಿಗೆ ಹೊಸ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಭದ್ರತೆ, ರಕ್ಷಣೆಗಳ ಮಹತ್ವ ನಾವು ಕಲಿಯಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಜಾಗೃತರಾಗಿ ರಕ್ಷಣೆಯ ಜವಾಬ್ದಾರಿಯ ನಿಜಸೈನಿಕನಾದಾಗ ಭಯವಿಲ್ಲದ ಬದುಕು ಭವಿಷ್ಯದಲ್ಲಿ ಸಾಕಾರಗೊಳ್ಳಬಲ್ಲದೆಂಬುದು ನಮ್ಮ ಅರಿವಲ್ಲಿರಬೇಕೆಂದು ಕರೆನೀಡಿದರು.
ನಿವೃತ್ತ ವೈಮಾನಿಕ, ವಿಂಗ್ ಕಮಾಂಡರ್ ಬಿ. ಎಸ್. ಸುದರ್ಶನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ತನ್ನ ನವ ವೈಜ್ಞಾನಿಕ ತಂತ್ರಜ್ಞಾನದ ಮಧ್ಯೆ ಇಸ್ರೇಲ್ ಒಮ್ಮೆಗೆ ಕಂಪಿಸಿದ್ದು ನಿಜ. ಅದರ ಗುಪ್ತಚರ ದಳ ಸಾಂಪ್ರದಾಯಿಕ ವ್ಯವಸ್ಥೆಯಿಂದ ಆಚೆಗೆ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಅತಿವಿಶ್ವಾಸ, ಮೈಮರೆವಿನಿಂದ ಹಿನ್ನಡೆಗೆ ಕೆಲವೊಮ್ಮೆ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಜಗತ್ತಿಗೆ ಪಾಠವಾಗಿದೆ ಎಂದರು.
ಲೇಖಕ ಶ್ರೀ ಮಂಜುನಾಥ ಅಜ್ಜಂಪುರ ಅವರು ಅತಿಥಿಗಳನ್ನು ಗೌರವಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯ
#93/1, ‘ಕೇಶವ ಶಿಲ್ಪ’, ಕೆಂಪೇಗೌಡ ನಗರ, ಬೆಂಗಳೂರು – 560 004
ದೂ: 080 2661 2730
ಇಮೇಲ್: sahitya@rashtrotthana.org
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #Israel #AjithHanumakkanavar
Project Info
- Category: News & Media
- Location: Keshava Shilpa, Bengaluru
- Completed Date: 11 Nov 2023