Interactions by Sahitya Wing
Two Interactions with Prof. Abdul Aziz, Senior Economist (June 29) and Prof. J S Sadananda, Professor of Political Science and Writer (Aug 10), by Rashtrotthana Sahitya.
Resource Development and Vocational Skills are the Key Principles of Economic Development: Prof. Abdul Aziz
Bengaluru, June 29: Opinion in an Interaction organised by Rashtrotthana Sahitya
ಸಂಪನ್ಮೂಲ ಅಭಿವೃದ್ದಿ ಹಾಗೂ ವೃತ್ತಿ ನೈಪುಣ್ಯಗಳು ಆರ್ಥಿಕ ಅಭಿವೃದ್ದಿಯ ಮುಖ್ಯಸೂತ್ರಗಳು: ಪ್ರೊ. ಅಬ್ದುಲ್ ಅಜೀಜ್
ಬೆಂಗಳೂರು, ಜೂನ್ 29: ರಾಷ್ಟ್ರೋತ್ಥಾನ ಸಾಹಿತ್ಯದ ಮಾತುಕತೆಯಲ್ಲಿ ಅಭಿಮತ
ರಾಷ್ಟ್ರದ ಆರ್ಥಿಕ ಅಭಿವೃದ್ದಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಮಹತ್ತರವಾದುದು. ಅಭಿವೃದ್ದಿ ಎಂಬುದು ಆಡಳಿತ ಯಂತ್ರದಿಂದ ಮಾತ್ರ ಸಾಕಾರಗೊಳ್ಳುವುದಲ್ಲ. ಮಾನವ ಸಂಪನ್ಮೂಲದ ಅಭಿವೃದ್ದಿ ಹಾಗೂ ವೃತ್ತಿ ನೈಪುಣ್ಯತೆಗಳು ಯಶಸ್ಸಿನ ಪ್ರಮುಖ ಮೆಟ್ಟಲು ಎಂದು ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಅಬ್ದುಲ್ ಅಜೀಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದಿಂದ ಇಲ್ಲಿನ ಕೇಶವಶಿಲ್ಪದಲ್ಲಿ ನಡೆದ ‘ಮಾತುಕತೆ’, ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಅವರು, ತಮ್ಮ ಬಾಲ್ಯದಿಂದ ಬೆಳೆದುಬಂದ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಮರಿಸುತ್ತಾ ಗ್ರಾಮೀಣ ಪ್ರದೇಶದಿಂದ ಈ ಮಟ್ಟದವರೆಗೆ ಬೆಳವಣಿಗೆಹೊಂದಲು ಕಾರಣರಾದ ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ವಿವಿಧ ವಲಯಗಳ ಶ್ರೇಷ್ಠ ವ್ಯಕ್ತಿತ್ವಗಳ ಬೆಂಬಲವೇ ಕಾರಣ ಎಂದರು. ಡಾ. ಚಿದಾನಂದಮೂರ್ತಿ, ಪ್ರೊ. ಡಿ.ಎನ್. ನಂಜುಂಡಪ್ಪ ಮೊದಲಾದವರ ನಿರಂತರ ಬೆಂಬಲದ ಕಾರಣ ಅರ್ಥಶಾಸ್ತ್ರದ ದೀರ್ಘ ಕಾಲದ ಸಲಹೆ, ಪಾಠಗಳು ಹೆಚ್ಚಿನ ಅಧ್ಯಯಯನಕ್ಕೆ ಬೆನ್ನೆಲುಬಾಯಿತು. ಕಾರ್ಮಿಕ ಅರ್ಥಶಾಸ್ತ್ರದ ಮೂಲದಿಂದ ತೊಡಗಿ ಇತ್ತೀಚಿನ ಅಭಿವೃದ್ದಿಶೀಲ ಅರ್ಥಶಾಸ್ತ್ರದವರೆಗಿನ ತಮ್ಮ ಅಧ್ಯಯನಗಳು ಸಂತೃಪ್ತಿ ನೀಡಿವೆ ಎಂದರು.
ಸರ್ಕಾರದ ಮಟ್ಟದಲ್ಲಿ ವಿವಿಧ ಯೋಜನೆಗಳ ಅಧ್ಯಯನ ಬಹಳಷ್ಟು ಅನುಭವಗಳನ್ನು ನೀಡಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಕೆಟ್ಟವರೆಂಬ ಭಾವನೆ ತಪ್ಪು. ನಿರ್ದೇಶಿಸಲ್ಪಟ್ಟ ಅಧ್ಯಯನ ವಿಷಯಗಳನ್ನು ಗುಣಮಟ್ಟಗಳೊಂದಿಗೆ ಸಮರ್ಪಕವಾಗಿ ನಿರ್ವಹಿಸಿದಾಗ ಎಲ್ಲರ ಪ್ರೋತ್ಸಾಹ-ಬೆಂಬಲಕ್ಕೆ ಕಾರಣವಾಗುತ್ತದೆ ಎಂದರು. ಆದರೆ ಅಧ್ಯಯನ ವರದಿಯಲ್ಲಿ ಹೇಳಲಾದ ಎಲ್ಲಾ ನಿರ್ದೇಶನಗಳನ್ನೂ ಜಾರಿಗೊಳಿಸಬೇಕೆಂಬುದು ಪ್ರಾಯೋಗಿಕವಲ್ಲ. ವಿವಿಧ ವರದಿಗಳ ಅನುಸಾರ ಚೌಕಟ್ಟುಗಳಡಿ ಯೋಜನೆಗಳು ಸಾಕಾರಗೊಳ್ಳುತ್ತವೆ ಎಂದರು.
ಅರ್ಥಶಾಸ್ತ್ರದ ಬಗೆಗಿನ ಆಸಕ್ತಿ ಇದ್ದರಷ್ಟೇ ಅದರ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಬೇಕು. ಒತ್ತಡ ಸಹಿತ ಬೇರೆಬೇರೆ ಆಶೋತ್ತರಗಳಿಂದ ಈ ಕ್ಷೇತ್ರದಲ್ಲಿ ಮುಂದುವರಿಯಲಾಗದು. ಆದರೆ ನಮ್ಮ ಆಸಕ್ತಿ ನ್ಯಾಯಯುವಾದ್ದೇ ಆಗಿದ್ದರೆ ಯಶಸ್ಸು ಸಾಧ್ಯ ಎಂದರು. ಅರ್ಥಶಾಸ್ತ್ರದ ಅಧ್ಯಯನ ಕೇವಲ ಕಾಲೇಜುಗಳ ಸಿದ್ದಪಠ್ಯಕ್ಕಿಂತ ಹೊರಗೆ ಇಣುಕಬೇಕು. ಹೆಚ್ಚು-ಹೆಚ್ಚು ಓದು ಈ ನಿಟ್ಟಿನಲ್ಲಿ ಅಗತ್ಯ ಎಂದರು.
ಭಾರತ ಇಂದು ಜಗತ್ತಿನ ಅತಿದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ರಾಷ್ಟ್ರವಾಗಿದ್ದು, ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೃತ್ತಿ ಕೌಶಲ್ಯ, ದುಡಿಮೆ ನಿರ್ವಹಿಸುವ ಬಗೆಗಿನ ಆಸಕ್ತಿ ಹಾಗೂ ಹಣದ ಬಳಕೆಯ ಬಗೆಗಿನ ಸಾಕ್ಷರತೆ ಬಲಗೊಳ್ಳಬೇಕು. ಇದರಿಂದ ಜಾಗತಿಕ ಶ್ರೇಯಾಂಕದಲ್ಲಿ ರಾಷ್ಟ್ರ ಉನ್ನತ ಸ್ತರಕ್ಕೆ ಮುಟ್ಟುವುದೆಂದು ಅವರು ತಿಳಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ಸಂಯೋಜಕರಾದ ಶ್ರೀ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಲೇಖಕ, ವಾಯ್ಸ್ ಆಫ್ ಇಂಡಿಯಾದ ಕನ್ನಡ ಸರಣಿಯ ಗೌರವ ಸಂಪಾದಕರಾದ ಶ್ರೀ ಮಂಜುನಾಥ ಅಜ್ಜಂಪುರ, ಪ್ರೊ. ಅಬ್ದುಲ್ ಅಜೀಜ್ ಅವರನ್ನು ಗೌರವಿಸಿ, ಅಭಿನಂದಿಸಿದರು.
—
ವರ್ತಮಾನದ ಜಾತಿ ವರ್ಗೀಕರಣ ಅವೈಜ್ಞಾನಿಕ: ಪ್ರೊ. ಜೆ. ಎಸ್. ಸದಾನಂದ: ರಾಷ್ಟ್ರೋತ್ಥಾನ ಸಾಹಿತ್ಯದ ಸಂವಾದದಲ್ಲಿ ಅಭಿಮತ
ಬೆಂಗಳೂರು, ಆಗಸ್ಟ್ 10: ಭಾರತದಲ್ಲಿ ಜಾತಿ ವ್ಯವಸ್ಥೆಯ ಬಗೆಗೆ ಸಮಾಜಶಾಸ್ತ್ರೀಯ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ದಶಕಗಳಿಂದ ನಡೆಯುತ್ತಿದ್ದರೂ ಒಮ್ಮತದ ನಿರ್ಣಗಳನ್ನು ತೆಗೆದುಕೊಳ್ಳುವಲ್ಲಿ ಸವಾಲುಗಳಿವೆ. ವಸಾಹತು ಕಾಲ ಸಂದರ್ಭದಿಂದ ಆರಂಭಗೊಂಡ ಜಾತಿ ವರ್ಗೀಕರಣದ ದಿಶೆ ಅಪೂರ್ಣವಾಗಿ ಅವೈಜ್ಞಾನಿಕ ಮಾದರಿಗಳೊಂದಿಗೆ ಜಟಿಲತೆ ಸೃಷ್ಟಿಸಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಜೆ. ಎಸ್. ಸದಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ವತಿಯಿಂದ ಶನಿವಾರ ಸಂಜೆ ಇಲ್ಲಿನ ಕೆಂಪೇಗೌಡ ನಗರದ ಕೇಶವಶಿಲ್ಪದಲ್ಲಿ ನಡೆದ ‘ಜಾತಿ ವರ್ಗೀಕರಣ: ಎಷ್ಟು ಸಮಂಜಸ – ವೈಜ್ಞಾನಿಕ?’ ವಿಷಯದ ಕುರಿತಾಗಿ ನಡೆದ ತಿಂಗಳ ಕಾರ್ಯಕ್ರಮ ‘ಮಾತುಕತೆ’ಯಲ್ಲಿ ಪ್ರೊ. ಜೆ. ಎಸ್. ಸದಾನಂದ ಅವರು ವಿಷಯ ಪ್ರಸ್ತುತಪಡಿಸಿ, ಚರ್ಚೆಯಲ್ಲಿ ಪಾಲ್ಗೊಂಡರು.
ವರ್ಣಗಳ ಅಡಿಯಲ್ಲಿ ಬೆಳೆದುಬಂದ ಜಾತಿ, ಉಪಜಾತಿ ಪರಿಕಲ್ಪನೆ ವೃತ್ತಿ ಆಧಾರಿತವಾಗಿ ಸ್ವರೂಪ ಪಡೆದುಕೊಂಡಿದ್ದರೂ, ಯುರೋಪಿಯನ್ ದೃಷ್ಟಿಕೋನದಡಿಯಲ್ಲಿ ವ್ಯತಿರಿಕ್ತವಾಗಿ ಗುರುತಿಸಲ್ಪಟ್ಟದ್ದು ದೌರ್ಭಾಗ್ಯಕರ. ಭಾರತದ ಜಾತಿ ಪರಿಕಲ್ಪನೆಯನ್ನು ಒಂದು ಸಾಮಾಜಿಕ ವ್ಯವಸ್ಥೆಯಾಗಿ ಕಾಣಬೇಕು. ಈ ವರ್ಗೀಕರಣವನ್ನು ತಾರಮ್ಯದ ಜಾತಿ ವ್ಯವಸ್ಥೆಯಂತೆ ಬಿಂಬಿಸಲಾಗಿದೆ. ಈ ವರ್ಗೀಕರಣ ವಾಸ್ತವವಾಗಿ ವೈಜ್ಞಾನಿಕವಲ್ಲ ಎಂದವರು ತಿಳಿಸಿದರು. ಜಾತಿ ವ್ಯವಸ್ಥೆ ದೇಶಾದ್ಯಂತ ಪ್ರತಿಯೊಂದು ವ್ಯಾಪ್ತಿ-ಪ್ರದೇಶಗಳಲ್ಲೂ ವಿಭಿನ್ನವಾಗಿದೆ. ಈ ನಿಟ್ಟಿನಲ್ಲಿ ಏಕಪ್ರಕಾರವಾದ ನಿರ್ಣಯಗಳು ಅಸಾಧ್ಯ ಎಂದವರು ತಿಳಿಸಿದರು.
ಪ್ರಸ್ತುತ ಸಂದರ್ಭ ಮೂಲಭೂತ ಅಗತ್ಯದ ಪೂರೈಕೆಯಾಗಬೇಕೇ ಹೊರತು ವರ್ಗೀಕರಣ ಅಲ್ಲ. ಸಾಮಾಜಿಕ ಸ್ವಾಥ್ಯ ಕಾಪಾಡಲು ಆಡಳಿತ ವರ್ಗ ಅನ್ಯಾಯಗಳನ್ನು ಸರಿಪಡಿಸಬೇಕು. ಶೋಷಣೆ ರಹಿತ ಸಮಾಜ ನಿರ್ಮಾಣದ ದೃಷ್ಟಿಯಿಂದ ಯುರೋಪಿಯನ್ ಮನಸ್ಥಿತಿಯ ವರ್ಗೀಕರಣದಿಂದ ವಿಘಟನೆಗಳು ದೊಂಬರಾಟಗಳಾಗಿ ಕುಣಿಯುತ್ತಿವೆ. ಭಾರತದ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಗಳಿಗೆ, ಕೌಟುಂಬಿಕ ಸುಸ್ಥಿರತೆಗೆ ಜಾತಿ ವ್ಯವಸ್ಥೆಗಳೇ ಕಾರಣ ಎಂದು ಅವರು ವಿಶ್ಲೇಷಿಸಿದರು.
ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ. ಎಸ್. ಚೈತ್ರ, ಶ್ರೀ ವಾದಿರಾಜ್, ಶ್ರೀ ರಾಧಾಕೃಷ್ಣ ಹೊಳ್ಳ, ವಾಯ್ಸ್ ಆಫ್ ಇಂಡಿಯಾ ಕನ್ನಡ ಸರಣಿಯ ಗೌರವ ಸಂಪಾದಕರಾದ ಶ್ರೀ ಮಂಜುನಾಥ ಅಜ್ಜಂಪುರ ಮೊದಲಾದವರು ಉಪಸ್ಥಿತರಿದ್ದು ಸಂವಾದಕ್ಕೆ ಧ್ವನಿಗೂಡಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ಸಂಚಾಲಕರಾದ ಶ್ರೀ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.
https://www.sahityabooks.com/
#Rashtrotthana #RashtrotthanaParishat #RashtrotthanaSahitya #Interaction #Abdulaziz #JSSadananda