ಬೆಂಗಳೂರು, ನ.9: ಖ್ಯಾತ ಕಾದಂಬರಿಕಾರರಾದ ಡಾ. ಗಜಾನನ ಶರ್ಮಾ ಅವರೊಂದಿಗೆ ಲೇಖಕ ವಿದ್ವಾನ್ ಜಗದೀಶಶರ್ಮಾ ಸಂಪ ಅವರು ಸಂವಾದ ನಡೆಸಿದರು.
ಪುನರ್ವಸು, ಚೆನ್ನಭೈರಾದೇವಿ, ರಾಜಮಾತೆ ಕೆಂಪನಂಜಮ್ಮಣ್ಣಿ ಕಾದಂಬರಿಗಳ ಸ್ತ್ರೀ ಪ್ರಾಧಾನ್ಯ, ಭೂ-ಜಲ ಸಂವೇದನೆ, ಅಧಿಕಾರಕ್ಕೆ ಅಂಟಿಕೊಳ್ಳದ ನಿಸ್ಪೃಹ ಭಾವ, ಲೇಖಕ ಗಜಾನನ ಶರ್ಮರಿಗೆ ಶರಾವತಿ ಮುಳುಗಡೆಯಿಂದಾದ ನೋವಿನ ಅಭಿವ್ಯಕ್ತಿ, ಮೊದಲಾದವುಗಳ ಸುತ್ತ ಸಂವಾದವು ಹೃದ್ಯವಾಗಿ ವಿಚಾರಪೂರ್ಣತೆಯಿಂದ ಪ್ರಾಮಾಣಿಕತೆಯ ಸ್ಪರ್ಶದಲ್ಲಿ ನವಿರು ಹಾಸ್ಯದ ಲೇಪವನ್ನೊಳಗೊಂಡು ನಡೆಯಿತು.
ಪ್ರಶ್ನೋತ್ತರಗಳ ಸಾರಸಂಗ್ರಹ:
ರತ್ನಗರ್ಭಾ ವಸುಂಧರಾ ಎನ್ನುವಂತೆ ರತ್ನಗರ್ಭಾ ಭಾರತ ಎನ್ನಬಹುದು. ಭಾರತದ ಮಹಾಮಹಿಮಾನ್ವಿತರಲ್ಲಿ ಕೆಂಪನಂಜಮ್ಮಣ್ಣಿಯೇ ಏಕೆ?
ಬೆಂಗಳೂರಿನಲ್ಲಿ ಸಾವಿರ ಪ್ರತಿಮೆಗಳಿವೆ. ಆದರೆ ಕೆಂಪನಂಜಮ್ಮಣ್ಣಿಯ ಪ್ರತಿಮೆ ಮಾತ್ರ ಇಲ್ಲ. ಬೆಂಗಳೂರಿಗೆ ನೀರು, ವಿದ್ಯುತ್ ಬಂದದ್ದಕ್ಕೆ ಕೆಂಪನಂಜಮ್ಮಣ್ಣಿ ಕಾರಣ. ಮಹಾರಾಣಿ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ, ಹಾಗೂ ಟಾಟಾ ವಿಜ್ಞಾನ ಸಂಸ್ಥೆಗೆ ಜಮೀನು ಕೊಡಲು ತೀರ್ಮಾನ ಮಾಡಿದ್ದು, ಶಿವನಸಮುದ್ರ ವಿದ್ಯುತ್ ಸ್ಥಾವರ ಕಟ್ಟಿಸಿದ್ದು, ಇವೆಲ್ಲ ಮಾಡಿದ್ದು ಕೆಂಪನಂಜಮ್ಮಣ್ಣಿಯೇ. 12ನೇ ವರ್ಷಕ್ಕೆ ಮದುವೆ ಆಗಿ 28ಕ್ಕೆಲ್ಲ ಐದು ಮಕ್ಕಳ ತಾಯಿಯಾಗಿ ವಿಧವೆ ಆದ ಹೆಣ್ಣುಮಗಳು ಇಷ್ಟೆಲ್ಲ ಸಾಧನೆ ಮಾಡಿದ್ದಕ್ಕೆ ಹಿನ್ನೆಲೆ ಅವರ ಘನವಾದ ವ್ಯಕ್ತಿತ್ವವೇ ಆಗಿದೆ.
ಕೆಲವರ ಆರೋಪವಿದೆ, ಭಾರತದ ಕೆಲವು ರಾಜ ಸಂಸ್ಥಾನಗಳು ಭಾರತಕ್ಕೆ ಏನೂ ಕೊಡುಗೆ ನೀಡದೇ, ಕೇವಲ ಭೋಗದಲ್ಲೇ ಕಳೆದವು ಎಂದು. ನೀವು ಎರಡೂ ರಾಜಮನೆತನದ ಇತಿಹಾಸವನ್ನು ಅಧ್ಯಯನ ಮಾಡಿ ಬರೆದಿದ್ದೀರಿ. ಈ ಆರೋಪಕ್ಕೆ ನಿಮ್ಮ ಉತ್ತರ?
ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 500 ರಾಜಮನೆತನಗಳಿದ್ದವು. ಆರೋಪ ಇರುವಂತೆ ಎಷ್ಟೋ ರಾಜಮನೆತನಗಳು ಬ್ರಿಟಿಷರ ಜೊತೆಗೆ ಸೇರಿಕೊಂಡು ಭೋಗವಾಗಿ ಕಳೆದದ್ದುಂಟು. ಮೈಸೂರು, ಬರೋಡಾ, ತಿರುವಾಂಕೂರಿನಂತಹ ಮನೆತನಗಳು ಬ್ರಿಟಿಷರಿಗೆ ತಲೆಬಾಗಿಕೊಂಡು ಬದುಕಿದರು. ಬ್ರಿಟಿಷರು ನಿಜಾಮನ ಜೊತೆ ಸೇರಿ ಗೆದ್ದ ರಾಜ್ಯವನ್ನು ಟಿಪ್ಪುವಿನ ನಂತರ ಹಂಚಿಕೆ ಮಾಡಿಕೊಳ್ಳುವಾಗ ಮೈಸೂರನ್ನು ಅವರಿಗೇ ಕೊಡಬೇಕೆಂಬ ಕಾರಣದಿಂದ ಮೈಸೂರನ್ನು ನಿಜಾಮರಿಗೆ ಕೊಡಲಿಲ್ಲ ಎನ್ನುತ್ತ ಆಗಿನ ಇತಿಹಾಸವನ್ನು ಬಿಚ್ಚಿಟ್ಟರು.
ಮುಂದೆ ‘ಹಸ್ತಾಂತರ ದಸ್ತಾವೇಜಿ’ನಲ್ಲಿ ಬ್ರಿಟಿಷರು ಹಾಕಿದ ಷರತ್ತುಗಳು ತುಂಬ ಕಠಿಣವಾಗಿದ್ದವು. 10ನೇ ಚಾಮರಾಜ ಒಡೆಯರ್ ಹಾಗೂ ದಿವಾನ ರಂಗಾಚಾರ್ಯರು ಆಡಳಿತ ನಡೆಸಿದ ಕಾಲದಲ್ಲಿ ಒಂದೇ ಒಂದು ಬಂದೂಕನ್ನು ಕೊಳ್ಳಲಿಕ್ಕೂ ಬ್ರಿಟಿಷರ ಅನುಮತಿ ಪಡೆಯಬೇಕಿತ್ತು. ಬ್ರಿಟಿಶರ ರೆಸಿಡೆಂಟ್ ಪಕ್ಕದಲ್ಲೇ ಇರುತ್ತಿದ್ದ. ಅಂತಹ ಕಠಿಣ ಸಂದರ್ಭದಲ್ಲೂ ಮಾರಿಕಣಿವೆಯಂತಹ ಪವರ್ ಸ್ಟೇಶನ್ ಕಟ್ಟಿದರು.
ಜೆಮ್ ಶೇಡಜೀ ಟಾಟಾ ಲಾರ್ಡ್ ಕರ್ಜನ್ ಗೆ ಟೀಚಿಂಗ್ ಯೂನಿರ್ವಸಿಟಿ ಕಟ್ಟಬೇಕೆಂದು ಹೇಳಿದರೆ, ಅದು ಇಲ್ಲಿ ಸಾಧ್ಯವಾಗದ ಮಾತು ಎಂದರು. ಟಾಟಾ ಹಠಬಿಡದೇ ಮುಂದೆ ಮೈಸೂರು ಸಂಸ್ಥಾನಕ್ಕೆ ಬಂದು ಶೇಷಾದ್ರಿ ಅಯ್ಯರ್ ಅವರಲ್ಲಿ ನಿಮ್ಮ ರಾಣಿಯವರಿಗೆ ಹೇಳಿ ಎಂದರು. ಕೆಂಪನಂಜಮ್ಮಣ್ಣಿ ಬರಿಯ ದುಡ್ಡು ಕೊಟ್ಟರೆ ಅದು ಮುಂಬಯಿ, ಪುಣೆ ಕಡೆ ಹೋಗಿಬಿಡುತ್ತದೆ, ಜಾಗವನ್ನೇ ಕೊಟ್ಟರೆ ನಮ್ಮಲ್ಲೇ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಅದಕ್ಕೆ ಜಾಗ, ನೀರು, ವಿದ್ಯುತ್ ಎಲ್ಲ ಮೂಲಭೂತ ಸೌಕರ್ಯ ಮಾಡಿಕೊಟ್ಟಾಗ ಟಾಟಾ ವಿಜ್ಞಾನ ಸಂಸ್ಥೆ ಹುಟ್ಟಿಕೊಂಡಿತು. ಇಂದಿನ ಐಐಟಿ ಮೊದಲಾದವುಗಳಿಗೆ ಮೂಲ ಇರುವುದು ಟಾಟಾ ವಿಜ್ಞಾನ ಸಂಸ್ಥೆಯಲ್ಲೇ.
ಪುನರ್ವಸುವಿನಲ್ಲಿ ಅವ್ಯಕ್ತವಾಗಿ ಶರಾವತಿ ಕಾಣುತ್ತಾಳೆ; ಅಲ್ಲಿಯ ಒಳಹರಿವು ಶರಾವತಿಯದು; ಚೆನ್ನಭೈರಾದೇವಿ, ಕೆಂಪನಂಜಮ್ಮಣ್ಣಿ; ಈ ರೀತಿ ಸ್ತ್ರೀಗೇ ಪ್ರಾಧಾನ್ಯತೆ ಏಕೆ?
ಬದುಕಿನಲ್ಲಿ ಎಲ್ಲವನ್ನೂ ಪಡೆದು, ಎಲ್ಲವನ್ನೂ ಸಂಬಂಧವೇ ಇಲ್ಲದಂತೆ ಬಿಟ್ಟುಹೋಗಲು ಸಾಧ್ಯವಾಗುವುದು ಬಹುಶಃ ಹೆಣ್ಣಿಗೆ ಮಾತ್ರ. ತಂದೆಮನೆಯಿಂದ ಎಲ್ಲವನ್ನೂ ಪಡೆದು ಮದುವೆಯಾದ ಬಳಿಕ ಇದೆಲ್ಲವನ್ನೂ ಬಿಟ್ಟುಹೋಗಿ ಪತಿಯ ಮನೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಸ್ತ್ರೀಗೆ ಮಾತ್ರ ಸಾಧ್ಯ. ನಾನು ಹುಟ್ಟುತ್ತಿದ್ದಂತೆ ತಾಯಿಯನ್ನು ಕಳೆದುಕೊಂಡರೂ ಸೋದರತ್ತೆ, ಅಕ್ಕ ಇವರೆಲ್ಲರ ಅಕ್ಕರೆಯಲ್ಲಿ ಬೆಳೆದು ಜಗತ್ತಿನ ಅಕ್ಕರೆಯಲ್ಲಿ ನನ್ನ ತಾಯಿಯನ್ನು ಕಂಡೆ. ಬಾಲ ವಿಧವೆಯರು ಮಕ್ಕಳನ್ನೇ ಹೆರದೇ 10-12 ಹೆರಿಗೆ ಮಾಡಿಸಿ ಮಕ್ಕಳನ್ನು ತಮ್ಮದೆಂಬಂತೆ ಸಾಕುವುದು ಹೆಣ್ಣಿಗೆ ಮಾತ್ರ ಸಾಧ್ಯ. ನಾವು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಗೌರವ ನೀಡುತ್ತೇವೆ, ಆದರೆ ಅವರಿಗೆ ದೊರಕಬೇಕಾದ ಸ್ಥಾನಮಾನವನ್ನು ನೀಡುವುದರಲ್ಲಿ ಸೋತಿದ್ದೇವೆ ಎಂದು ನನಗನಿಸುತ್ತದೆ. ಏಕೆಂದರೆ ಚೆನ್ನಭೈರಾದೇವಿ, ಕೆಂಪನಂಜಮ್ಮಣ್ಣಿ ಇವರೆಲ್ಲ ಇತಿಹಾಸದ ಪ್ರಧಾನವಾಹಿನಿಯಿಂದ ಕಣ್ಮರೆಯೇ ಆಗಿದ್ದಾರೆ. 36 ವರ್ಷದ ಕೆಂಪನಂಜಮ್ಮಣ್ಣಿ ಬ್ರಿಟೀಷರ ಸಂಕೋಲೆಯೊಳಗೆ ಇದ್ದೂ ಉತ್ತಮ ಆಡಳಿತ ನೀಡಿ ಮಗನಿಗೆ ಅಧಿಕಾರ ಹಸ್ತಾಂತರ ಮಾಡಿದಳು. ಸ್ತ್ರೀಗೆ ದೊರಕಬೇಕಾದ ಸ್ಥಾನಮಾನದ ಕುರಿತು ನನ್ನ ಮನಸ್ಸಿನ ಮಥನವೇ ಇದಕ್ಕೆ ಕಾರಣವಿರಬಹುದು ಎನ್ನುವ ಗಜಾನನ ಶರ್ಮಾ ಅವರು ತಮ್ಮ ಬರವಣಿಗೆ ಮೂಲಕ ಸ್ತ್ರೀಗೆ ಸಲ್ಲಬೇಕಾದ ಗೌರವ, ಸ್ಥಾನಮಾನವನ್ನು ನೀಡುವ ಪ್ರಯತ್ನ ನನ್ನಿಂದ ಅಪ್ರಯತ್ನಪೂರ್ವಕವಾಗಿ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಹೆಣ್ಣು ಅಂಟಿಕೊಳ್ಳುವವಳು, ಗಂಡು ಅಂಟಿಕೊಳ್ಳದವನೆನ್ನುವುದು ಸಾಮಾನ್ಯ ಅಭಿಪ್ರಾಯ. ನೀವು ಚಿತ್ರಿಸುವ ಸ್ತ್ರೀ ಪಾತ್ರದಲ್ಲಿ ಎಲ್ಲದಕ್ಕೂ ಅಂಟಿಕೊಂಡು ಛಕ್ಕಂತ ಬಿಡುವುದನ್ನೇ ಚಿತ್ರಿಸಿದ್ದೀರಿ. ಹೆಣ್ಣು ಅಂಟಿಕೊಳ್ಳದವಳು ಎನ್ನುವುದನ್ನು ಬಿಂಬಿಸುತ್ತಿದ್ದೀರಾ?
ಅದು ಅಪ್ರಜ್ಞಾಪೂರ್ವಕ. ಒಂದು ಪಾತ್ರ ನಮ್ಮಿಂದ ಒಂದಷ್ಟು ಬೇಡುತ್ತದೆ. ಮಾತುಕತೆ ನಡೆನುಡಿಯಲ್ಲಿ ಪುರುಷ ಹೀಗೆ, ಸ್ತ್ರೀ ಹೀಗೆ ಎಂದು ಹೇಳಬಹುದು; ಆದರೆ ಒಟ್ಟಾರೆ ಹಾಗೇ ಇರುವುದಿಲ್ಲ.
ನಿಮ್ಮ ಬರವಣಿಗೆಯಲ್ಲಿ ನೀರು, ನೆಲದ ಮೇಲೆ ಹೆಚ್ಚು ಒತ್ತು ಕಾಣುತ್ತದೆ. ನೀರು, ನೆಲ ನಿಮ್ಮನ್ನು ಅಷ್ಟು ಕಾಡುವುದು ಏಕೆ?
“ಮುಳುಗಡೆ. ಮುಳುಗಡೆ ಎಂದರೆ ಬೇರಿನಿಂದ ಬೇರನ್ನು ಕತ್ತರಿಸಿ ಬೇರೆಯಾಗುವುದು. ಜೋಗ ನಿಮಗೆಲ್ಲ ಜೋಗ ಖುಷಿ ಕೊಡಬಹುದು; ನನಗೆ ಮಾತ್ರ ನಮ್ಮ ಬದುಕನ್ನೇ ಮುಳುಗಿಸಿದ ಜೋಗ ಕಂಡರೆ ಕೋಪ ಉಕ್ಕುತ್ತದೆ. ನನ್ನ ಸಮೃದ್ಧ ಬದುಕನ್ನು ಗಂಜಿಗೆ ತಳ್ಳಿದ್ದು ಮುಳುಗಡೆ. ಈಗೆಲ್ಲ ವಲಸೆ ಎನ್ನುವುದು ಸಾಮಾನ್ಯ ಸಂಗತಿಯಾಗಿರಬಹುದು; ಆದರೆ ಆಗೆಲ್ಲ ನಮ್ಮ ಹಿರಿಯರು ಒಂದು ಹಲಸಿನ ಮರ ನೆಟ್ಟರೆ ನಾನು, ನನ್ನ ಮಗ ಹಣ್ಣು ತಿನ್ನದಿದ್ದರೂ ನನ್ನ ಮೊಮ್ಮಗ ತಿನ್ನುತ್ತಾನೆ ಎಂದು ಯೋಚಿಸುವ ಕಾಲ. ಮನೆಗೆ ಹಾಕಿದ ಮರದಿಂದ ಹಿಡಿದು, ಬೀಸುವ ಕಲ್ಲಿನವರೆಗೆ ಕಿತ್ತು, ಬೆಚ್ಚಗಿನ ಬದುಕು, ಮನೆಯನ್ನೆಲ್ಲ ಕಿತ್ತು ಊರು ಬಿಟ್ಟ ರೀತಿ ನೋಡುವುದು ಪಾಪದ ಕೆಲಸ” ಎನ್ನುವಾಗ ಆ ದಿನಗಳನ್ನು ನೆನೆದು ಗಜಾನನ ಶರ್ಮಾ ಅವರು ಗದ್ಗದಿತರಾದರು.
ನನ್ನ ಒಳಪ್ರಜ್ಞೆಯಲ್ಲಿ ಅಡಗಿದ ನೀರು, ನೆಲವನ್ನು ನನ್ನ ಬರವಣಿಗೆಯಲ್ಲಿ ಬಿಂಬಿಸಿದ್ದೇನೆ ಎಂದರು.
ಈಗ ಐತಿಹಾಸಿಕ ಕಾದಂಬರಿಗಳ ಸುರಿಮಳೆ. ಇತಿಹಾಸವೂ ತಿರುಚಿದೆ. ಕಾದಂಬರಿಯಲ್ಲೂ ಇತಿಹಾಸ ತಿರುಚಿದೆ. ಮೂಲ ಇತಿಹಾಸವನ್ನು ಅಧ್ಯಯನ ಮಾಡಿ ಬರೆಯುವ ನೀವು ತಿರುಚಿದ ಬಗೆಯ ಬಗ್ಗೆ ಏನು ಹೇಳುತ್ತೀರಿ?
ಇತಿಹಾಸವೆಂದರೆ ನೂರಕ್ಕೆ ನೂರು ನಡೆದಂತೆ ಇರುವುದಿಲ್ಲ. ಇತಿಹಾಸವೆಂಬ ಚಿತ್ರ ಗ್ಯಾಲರಿಯಲ್ಲಿ ಕೆಲವು ಮಾತ್ರ ಒರಿಜಿನಲ್ ಎನ್ನುತ್ತಾರೆ. ಆದರೆ ನಮ್ಮ ದೇಶದಲ್ಲಿ ಐತಿಹಾಸಿಕ ವ್ಯಕ್ತಿಗಳ ಚಾರಿತ್ರ್ಯದ ಜೊತೆಗೆ ಇತಿಹಾಸದ ಚಾರಿತ್ರ್ಯವನ್ನೇ ಹಾಳುಮಾಡಿರುವುದು ಬೇಸರದ ಸಂಗತಿ ಎಂದು ಗಜಾನನ ಶರ್ಮಾ ಅವರು ಚರಿತ್ರೆಯನ್ನು ತಿರುಚುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಉದಾಹರಣೆಗೆ ಒಬ್ಬ ವಿದೇಶೀಯ ಪ್ರವಾಸಕ್ಕೆಂದು ಬರುತ್ತಾನೆ. ಚೆನ್ನಭೈರಾದೇವಿಯ ಸ್ಥಳಕ್ಕೆ ಬರುತ್ತಾನೆ. ಆತ 18, 20 ದಿನದಲ್ಲಿ ಆಕೆಯ ಕುರಿತು ಏನು ಸಂಗ್ರಹ ಮಾಡಬಹುದು, ತಿಳಿದುಕೊಳ್ಳಬಹುದು? ರೋಚಕವಾಗಿ ಬರೆಯುವ ಒತ್ತಡವೂ ಕೆಲವೊಮ್ಮೆ ಇರಬಹುದು. ಯಾರೋ ಕೆಲವರು ಹೇಳಿದ್ದನ್ನು ಕೇಳಿ ದಾಖಲಿಸಬಹುದು. ನಮ್ಮ ಇತಿಹಾಸ ವಸಾಹತುಶಾಹಿಗಳು ಬರೆದದ್ದು. 1542ರಲ್ಲಿ ಭಟ್ಕಳವನ್ನು ಪೋರ್ಚುಗೀಸರು ಸುಟ್ಟರು. ಅದನ್ನು ನಾಲ್ಕು ಇತಿಹಾಸಕಾರರು ನಾಲ್ಕು ಬಗೆಯಲ್ಲಿ ಬರೆದಿದ್ದಾರೆ ಎನ್ನುತ್ತ ಇತಿಹಾಸದ ಸತ್ಯಾಸತ್ಯತೆಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆನ್ನಭೈರಾದೇವಿ ತನ್ನ ಪ್ರಿಯಕರನಿಗಾಗಿ ರಾಜ್ಯವನ್ನೇ ಕೊಟ್ಟಳು ಎನ್ನುತ್ತದೆ ಇತಿಹಾಸ. ಅವಳು ರಾಜ್ಯವನ್ನು ಕೊಟ್ಟದ್ದು 74ನೇ ವಯಸ್ಸಿನಲ್ಲಿ. ಆಗ ಪ್ರಿಯಕರನಿಗಾಗಿ ಎಂದರೆ ನಂಬಲು ಕಷ್ಟವೇ ಸರಿ. ಕಾನೂರು ಗೇರಸೊಪ್ಪೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಬಾವಿಗಳಿವೆ. ಕಾನೂರು ಕೋಟೆ ಎಂತಹ ಆಯಕಟ್ಟಿನ ಜಾಗದಲ್ಲಿದೆ. ಅಲ್ಲಿನ ಸ್ಥಳೀಯರಿಗೆ ಆಕೆಯ ಬಗ್ಗೆ ಇನ್ನಿಲ್ಲದ ಗೌರವವನ್ನು ಕಾಣಬಹುದು. ಆಕೆಯನ್ನು ಪೂಜಿಸುತ್ತಾರೆ. ಆಕೆ ಅಂತಹ ವ್ಯಕ್ತಿತ್ವದವಳಾಗಿದ್ದರೆ ಈಗಲೂ ಹಾಗೆ ಪೂಜಿಸಲು ಸಾಧ್ಯವೇ? ಎಂದು ಪ್ರಶ್ನಿಸುವ ಶರ್ಮರು, ಕಾಲಕ್ರಮದಲ್ಲಿ ಜನರಿಗೆ ಸತ್ಯವೇನೆಂದು ತಿಳಿಯುವ ಹಂಬಲವಾಗುತ್ತದೆ, ಇತಿಹಾಸ ಬರೆದಿದ್ದೇನೆಂದು ಹೇಳುವವರು ಒಂದಷ್ಟು ಲಿಂಕ್ ಬಿಟ್ಟುಬಿಡುತ್ತಾರೆ. ಆ ಲಿಂಕ್ ಅನ್ನು ನಾವು ಕೊಡುತ್ತೇವೆ ಎಂದರು.
ಇತಿಹಾಸದಲ್ಲಿ ಇನ್ನೂ ಸಾಕಷ್ಟು ತೆರೆಯದ ಬಾಗಿಲುಗಳಿವೆ; ಅದನ್ನು ನಾವು ತೆರೆದಿದ್ದೇವೆ. ಅದರಲ್ಲಿ ಚೆನ್ನಭೈರಾದೇವಿ, ಕೆಂಪನಂಜಮ್ಮಣ್ಣಿಯಂಥವರೂ ಇದ್ದಾರೆ ಎಂದರು.
ಇನ್ನಷ್ಟು ಬೇಕೆನ್ನ… ಅಯೋಧ್ಯೆಯ ವರೆಗೆ ಹೋಯಿತು. ನಿಮಗೆ ಏನೆನಿಸಿತು?
ಧನ್ಯತೆ. ಆ ಕವನದಲ್ಲಿ ಭಾವವನ್ನು ಬಿಟ್ಟರೆ ಏನೂ ಇಲ್ಲ. ಇತ್ತೀಚೆಗೆ ಅದೇ ಸಾಲುಗಳನ್ನು ನೋಡಿದರೆ ನಾನೇ ಬರೆದದ್ದಾ ಅನಿಸುತ್ತದೆ ಎನ್ನುತ್ತ ತಮ್ಮ ಮಾತನ್ನು ಮುಗಿಸಿದರು.
37 ದಿನಗಳ ಕನ್ನಡ ಪುಸ್ತಕ ಹಬ್ಬದಲ್ಲಿ (ಅ.26 – ಡಿ.1)
@ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು
ಸಹಯೋಗ – ಸಂಸ್ಕಾರಭಾರತೀ, ಬೆಂಗಳೂರು
https://www.sahityabooks.com/
#Rashtrotthana #RashtrotthanaParishat #RashtrotthanaSahitya #kannada #kannadapustaka #KannadaPustakaHabba #samskarabharathi #samvada
Project Info
- Category: News & Media
- Location: Keshava Shilpa, Bengaluru
- Completed Date: 09 Nov 2024