
ಇಂದು ನಮ್ಮನ್ನಗಲಿದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ
ರಾಷ್ಟ್ರೋತ್ಥಾನ ಪರಿವಾರದವರಿಂದ ಶ್ರದ್ಧಾಂಜಲಿಗಳು ಹಾಗೂ ಸದ್ಗತಿಗೆ ಪ್ರಾರ್ಥನೆಗಳು!
ಸಮರ್ಥ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಸಾಹಿತ್ಯಭಿರುಚಿಯನ್ನೂ ಜೀವನಪ್ರೀತಿಯನ್ನೂ ತುಂಬಿದ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಜನಸಾಮಾನ್ಯರಲ್ಲೂ ಕನ್ನಡ ಕಾವ್ಯಪ್ರೀತಿಯನ್ನು ಬೆಳೆಸಿದವರು. ಅವರ ನೂರಾರು ಭಾವಪೂರ್ಣ ಕವನಗಳನ್ನು ಕೇಳದ, ಗುನುಗಿಕೊಳ‍್ಳದ ದಿನಗಳು ಇರಲಿಕ್ಕಿಲ್ಲ. ಅಸಂಖ್ಯ ಭಾವಗೀತೆಗಳು, ಹತ್ತಾರು ಕವನಸಂಕಲನಗಳು, ಕಥಾಸಂಕಲನಗಳು, ಕಾದಂಬರಿಗಳು, ಸಾಹಿತ್ಯಚರಿತ್ರೆ, ಸಾಹಿತ್ಯವಿಮರ್ಶೆ, ಅನುಭವ ಕಥನ, ಸಂಪಾದನೆ, ನಾಟಕಗಳು, ಅನುವಾದ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಸೇರಿದಂತೆ ಅವರು ನೀಡಿದ ಕೊಡುಗೆಗಳು ಅಮೂಲ್ಯವಾದವು. ಹತ್ತಾರು ಚಲನಚಿತ್ರಗಳಿಗೆ ಗೀತೆ-ಸಂಭಾಷಣೆಗಳನ್ನು, ಹಲವು ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನು ಅವರು ಬರೆದಿದ್ದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಾರಂಭದ ದಿನಗಳಿಂದಲೂ ಒಡನಾಡದಲ್ಲಿದ್ದ ಎಚ್ಚೆಸ್ವಿ ‘ಉತ್ಥಾನ’ ಪತ್ರಿಕೆಗೆ ಹಲವು ಕವನ-ಲೇಖನಗಳನ್ನು ಬರೆದುಕೊಟ್ಟವರು. ‘ಕೃತಿರೂಪ ಸಂಘದರ್ಶನ’, ‘ಭಾರತ-ಭಾರತಿ ಪುಸ್ತಕ ಸಂಪದ’ ಸೇರಿದಂತೆ ನಮ್ಮ ಹಲವು ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಿದವರು. ಮೊದಲನೆಯ ವರ್ಷದ ‘ಕನ್ನಡ ಪುಸ್ತಕ ಹಬ್ಬ’ದ ಸಮಾರೋಪದಲ್ಲೂ ಅವರು ಉತ್ಸಾಹದಿಂದ ಪಾಲ್ಗೊಂಡು ಸಂತಸಪಟ್ಟಿದ್ದರು.
ಅದಮ್ಯ ಜೀವನಪ್ರೀತಿಯ, ನಿಷ್ಕಲ್ಮಷ ನಗುವಿನ ಎಚ್ಚೆಸ್ವಿಯವರ ಜೀವನ-ಸಾಧನೆ, ಅದಕ್ಕೂ ಮೀರಿದ ಅವರ ಸ್ನೇಹಮಯಿ ವ್ಯಕ್ತಿತ್ವ ಕನ್ನಡಿಗರ ಮನದಲ್ಲಿ ಹಸಿರಾಗಿರುತ್ತದೆ.
ಅವರ ಅಗಲಿಕೆಯ ಈ ಸಂದರ್ಭದಲ್ಲಿ ಅವರ ಸದ್ಗತಿಗಾಗಿ ಭಗವಂತನಲ್ಲಿ ಪ್ರಾರ್ಥನೆಗಳು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೂ, ವಿದ್ಯಾರ್ಥಿವೃಂದಕ್ಕೂ, ಅಭಿಮಾನಿ ಓದುಗ ಪರಿವಾರಕ್ಕೂ ಭಗವಂತ ಕರುಣಿಸಲಿ.
#Rashtrotthana #hsv #hsvenkateshmurthy #shraddhanjali
Project Info
- Category: News & Media
- Location: Bengaluru
- Completed Date: 30 May 2025