37 ದಿನಗಳ ಕನ್ನಡ ಪುಸ್ತಕ ಹಬ್ಬಕ್ಕೆ ತೆರೆ
ಬೆಂಗಳೂರು, ಡಿ. 1: 37 ದಿನಗಳ ಕಾಲ ನಿರಂತರವಾಗಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ 4ನೇ ಕನ್ನಡ ಪುಸ್ತಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ ಸಾಹಿತ್ಯ ಪರಿಚಾರಕರು ಹಾಗೂ ಪ್ರಕಾಶಕರಾದ ಶ್ರೀ ಪ್ರಕಾಶ್ ಕೊಡೆಂಕಿರಿಯವರಿಗೆ ಗೌರವಾರ್ಪಣೆ ಮಾಡಲಾಯಿತು.
ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಪ್ರಸಿದ್ಧ ಮನೋವೈದ್ಯರು ಹಾಗೂ ಲೇಖಕರಾದ ಡಾ. ಸಿ. ಆರ್. ಚಂದ್ರಶೇಖರ್ ಹಾಗೂ ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ಶ್ರೀ ನರೇಂದ್ರ ಕುಮಾರ್, ನಟ, ನಿರ್ದೇಶಕರಾದ ಶ್ರೀ ಸುಚೇಂದ್ರ ಪ್ರಸಾದ್ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ರಾಷ್ಟ್ರೋತ್ಥಾನ ಪರಿಷತ್‌ಗೆ 60 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಕನ್ನಡ ಪುಸ್ತಕ ಹಬ್ಬವನ್ನು 37 ದಿನಗಳ ಕಾಲ ಆಯೋಜಿಸಿದ್ದು, ಕಳೆದ ಅಕ್ಟೋಬರ್ 26ರಂದು ಆದಿಚುಂಚನಗಿರಿ ಶ್ರೀಗಳು, ಡಾ. ಚಂದ್ರಶೇಖರ ಕಂಬಾರರು, ಡಾ. ಮಹೇಶ ಜೋಶಿ ಮೊದಲಾದ ಗಣ್ಯರು ಚಾಲನೆ ನೀಡಿದರು.
ಸಂಸ್ಕಾರಭಾರತಿಯ ಸಹಯೋಗದಲ್ಲಿ ನಾಟ್ಯ, ಸಂಗೀತ, ತಾಳಮದ್ದಲೆ, ಜಾನಪದ, ಯಕ್ಷಗಾನ ಮೊದಲಾದ 35ಕ್ಕೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ಹಬ್ಬದೊಳಗೆ ಆಕರ್ಷಕ ರಿಯಾಯಿತಿಯಲ್ಲಿ ಪುಸ್ತಕ ಮಾರಾಟವನ್ನು ವ್ಯವಸ್ಥೆಗೊಳಿಸಲಾಗಿದ್ದು, ರಾಷ್ಟ್ರೋತ್ಥಾನ ಸಾಹಿತ್ಯದ 6 ಹೊಸ ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು.
ಖ್ಯಾತ ಕಾದಂಬರಿಕಾರರಾದ ಶ್ರೀಮತಿ ಸಹನಾ ವಿಜಯಕುಮಾರ್ ಹಾಗೂ ಡಾ. ಗಜಾನನ ಶರ್ಮಾ ಅವರೊಂದಿಗೆ ಸಂವಾದ ಕಾರ್ಯಕ್ರಮಗಳು ಹಾಗೂ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ, ಕಾರ್ಯಾಗಾರಗಳನ್ನೂ ಆಯೋಜಿಸಲಾಗಿತ್ತು.
ಮಕ್ಕಳು, ಯುವಕರು, ಹಿರಿಯರು, ಹೀಗೆ ಎಲ್ಲರೂ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಪ್ರದರ್ಶನಕ್ಕಿಟ್ಟಿದ್ದ ಪುಸ್ತಕಗಳನ್ನು ವೀಕ್ಷಿಸುತ್ತಾ ಒಂದಷ್ಟು ಪುಸ್ತಕಗಳನ್ನು ಕೊಂಡು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿ, ಒಟ್ಟಾರೆಯಾಗಿ ಪುಸ್ತಕ ಹಬ್ಬವು ಯಶಸ್ವಿಯಾಗಿ ಸಂಪನ್ನಗೊಂಡಿತು.
ನಾನು ಮನೋವೈದ್ಯನಾಗಲು ಲೇಖಕಿ ತ್ರಿವೇಣಿಯವರ ಮನೋ ವೈಜ್ಞಾನಿಕ ಕಾದಂಬರಿಗಳು ಹಾಗೂ ಡಾ. ಶಿವರಾಮ್ (ರಾಶಿ) ಅವರ ಮನೋನಂದನ, ಮನಮಂಥನದಂತಹ ಪುಸ್ತಕಗಳೇ ಕಾರಣ ಎನ್ನುತ್ತಲೇ ತಮ್ಮ ಮಾತನ್ನಾರಂಭಿಸಿದ ಡಾ. ಸಿ. ಆರ್. ಚಂದ್ರಶೇಖರ್ ಅವರು ತಾನು ವೈದ್ಯಕೀಯ ಪದವಿ ಪಡೆದ ದಿನಗಳಲ್ಲಿ ಮನೋವೈದ್ಯರಾಗುವುದಕ್ಕೆ ಹೆಚ್ಚು ಮಂದಿ ಮುಂದಾಗುತ್ತಿರಲಿಲ್ಲ. ತಾನು ಹೈಸ್ಕೂಲಿನಲ್ಲಿದ್ದಾಗ ಈ ಪುಸ್ತಕಗಳನ್ನು ಓದಿದ್ದೆ. ಪುಸ್ತಕಗಳು ನಮ್ಮ ಬದುಕನ್ನೇ ಬದಲಿಸುತ್ತವೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕಗಳು ಜ್ಞಾನಮಿತ್ರ. ನಮ್ಮಲ್ಲಿ ಈಗಲೂ ಸಾಕಷ್ಟು ಮೌಢ್ಯಗಳಿದ್ದು, ಜನ ಮಾನಸಿಕ ಕಾಯಿಲೆಗೆ ಮೊದಲು ಮಾಂತ್ರಿಕರ ಬಳಿಗೆ ಹೋಗಿ ಗುಣವಾಗದೇ ನಮ್ಮ ಬಳಿ ಬರುತ್ತಾರೆ. ನಮ್ಮ ಮೌಢ್ಯಗಳನ್ನು ಕಳೆಯುವುದು ಪುಸ್ತಕಗಳೇ ಎಂದರು. ಪ್ರಾಣಿಗಳಲ್ಲೇ ಮನುಷ್ಯನ ಮೆದುಳು ಅತಿ ಹೆಚ್ಚು ತೂಕದ್ದಾಗಿದೆ. ಜನ ಗೂಗಲ್, ಇಂಟರನೆಟ್ ಮೊರೆ ಹೋಗುವುದನ್ನು ಬಿಟ್ಟು ಪುಸ್ತಕಗಳ ಮೊರೆ ಹೋದರೆ ಅಧಿಕೃತ ಮಾಹಿತಿ ದೊರಕುತ್ತದೆ. ಕಾಲೇಜಿನ ಹುಡುಗರು ಪುಸ್ತಕ ಕೊಳ್ಳುವುದೇ ಕಡಿಮೆ ಎಂದರು.
ಲೇಖಕರು ತಾವೇ ದುಡ್ಡು ಕೊಟ್ಟು ತಮ್ಮ ಕೃತಿಗಳನ್ನು ಪ್ರಕಾಶನ ಮಾಡಿಸುವ ಸನ್ನಿವೇಶವಿದೆ. ನಮ್ಮ ಹಿಂದಿನ ತಲೆಮಾರಿನವರು ಸಹ ತಮ್ಮ ಪದಕ ಮಾರಿ ಹಣ ಹಾಕಿಕೊಂಡು ಪುಸ್ತಕ ಪ್ರಕಟಿಸಿ ತಾವೇ ತಲೆಮೇಲೆ ಹೊತ್ತು ಮಾರಿದ್ದೂ ಇದೆ. ವೈದ್ಯಕೀಯ ಸಾಹಿತ್ಯಕ್ಕೆ ಚೆನ್ನಾಗಿ ಬೇಡಿಕೆಯಿದೆ. ನಮ್ಮಲ್ಲಿ ಒಂದೂವರೆ ಲಕ್ಷ ವೈದ್ಯರಲ್ಲಿ 150 ವೈದ್ಯರು ಮಾತ್ರ ಬರೆಯುತ್ತಾರೆ. ಮನೆಯಲ್ಲಿ ಒಂದು ಆರೋಗ್ಯದ ಮೇಲಿನ ಪುಸ್ತಕವಿದ್ದರೆ ವೈದ್ಯನಿದ್ದಂತೆ ಎಂದರು.
ಮನಸ್ಸಿಗೆ ಹಿತವನ್ನುಂಟುಮಾಡುವುದೇ ಸಾಹಿತ್ಯ. ನಮ್ಮಲ್ಲಿ ಕನ್ನಡ ಮಾಧ್ಯಮವೇ ಯಾರಿಗೂ ಬೇಡವಾಗಿದೆ. ಜರ್ಮನಿ, ಫ್ರೆಂಚ್‌ನವರೆಲ್ಲ ಇಂಗ್ಲಿಷನ್ನು ಕೇರ್ ಮಾಡಲ್ಲ; ನಾವೇ ಅದನ್ನು ತಲೆಮೇಲೆ ಹೊತ್ತು ಮೆರೆಯುತ್ತೇವೆ. 70% ವಿದ್ಯಾರ್ಥಿಗಳಿಗೆ ಕನ್ನಡವನ್ನು ಓದಲು ಬರೆಯಲು ಬರುವುದಿಲ್ಲ. ಎಂ.ಎ. ಮಾಡಿದವನು ಒಂದು ಪ್ಯಾರಾದಲ್ಲಿ ಮೂವತ್ತಾದರೂ ತಪ್ಪನ್ನು ಮಾಡಿರುತ್ತಾನೆ. ಬರೆಯುವವರ ಸಂಖ್ಯೆ ಹೆಚ್ಚಿದೆಯಾದರೂ ಓದುವವರ ಸಂಖ್ಯೆ ಕಡಿಮೆಯಾಗಿದೆ; ಕಾಲೇಜಿನ ಹುಡುಗರಂತೂ ಪುಸ್ತಕವನ್ನು ಖರೀದಿಸುವುದೇ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಕ್ಕೆ 6000 ವರ್ಷಗಳ ಇತಿಹಾಸವಿದೆ; ಲಿಖಿತ ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಮಕ್ಕಳಿಗೆ ಪುಸ್ತಕ ಪ್ರೀತಿಯನ್ನು ವರ್ಗಾಯಿಸಿ, ಕನ್ನಡವನ್ನು ಬೆಳೆಸಿ ಎಂದರು.
ಪ್ರತಿ ಒಂದು ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಯುವಜನಾಂಗಕ್ಕೆ ಬದುಕುವ ಕಲೆಯನ್ನು ಕಲಿಸಬೇಕಾಗಿದೆ. ಕಷ್ಟ ಬಂದಾಗ ಎದುರಿಸುವ ಕಲೆಯನ್ನು ಪುಸ್ತಕ ಕಲಿಸುತ್ತದೆ ಎನ್ನುತ್ತ ಹಲವಾರು ಧೀಮಂತ ವ್ಯಕ್ತಿಗಳ ಉದಾಹರಣೆಯೊಂದಿಗೆ ವಿವರಿಸಿದರು. ಕೊನೆಯಲ್ಲಿ ಪ್ರೇಕ್ಷಕರೊಡನೆ ಪ್ರಶ್ನೋತ್ತರ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಅವರು ಮಾತನಾಡುತ್ತ, ಕನ್ನಡ ಪುಸ್ತಕ ಹಬ್ಬದಲ್ಲಿ ಸಂಸ್ಕೃತಿಯ ಅನಾವರಣವೂ ಆಗಿದೆ. ಈ ಹಬ್ಬ ರಾಜ್ಯದ ಇತರ ಕಡೆಗಳಲ್ಲೂ ಆಗಲಿದೆ. ಪುಸ್ತಕಗಳು ಸಂಸ್ಕೃತಿಯ ವಾಹಕಗಳಾಗಿದ್ದು ಒಳ್ಳೆಯ ಸ್ನೇಹಿತರೂ ಹೌದು. ರಾಷ್ಟ್ರೋತ್ಥಾನ ಸಾಹಿತ್ಯವು ದೇಶಭಕ್ತಿ, ಸಂಸ್ಕೃತಿ, ವ್ಯಕ್ತಿತ್ವವಿಕಸನದಂತಹ ಪುಸ್ತಕಗಳನ್ನು ಪ್ರಕಟಿಸಿದೆ. ಇಂದು ಕನ್ನಡವನ್ನು ಉಳಿಸುವುದೇ ಕಷ್ಟವಾಗಿದ್ದು, ಶುದ್ಧ ಕನ್ನಡವೂ ದೊರೆಯದಂತಾಗಿದೆ. ಓದುಗರ ಸಂಖ್ಯೆಯೂ ಕಡಿಮೆಯಾಗಿದೆ. ಬೇರೆಬೇರೆ ಮಾಧ್ಯಮವನ್ನು ಬಳಸಿ ನಮ್ಮ ಭಾಷೆಯನ್ನು ಬೆಳೆಸಬೇಕು. ಕೃತಕಬುದ್ಧಿಮತ್ತೆಯಿಂದ ಕನ್ನಡ ಹಿಂದೆ ಉಳಿಯಬಾರದು. ಕನ್ನಡದ ಬೆಳವಣಿಗೆಗೆ ತಂತ್ರಜ್ಞಾನದೊಡನೆ ಹೆಜ್ಜೆ ಹಾಕುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಪರಿಚಾರಕರೂ ಪ್ರಕಾಶಕರೂ ಆದ ಶ್ರೀ ಪ್ರಕಾಶ್ ಕೊಡಂಕಿರಿ ಅವರು ಗೌರವ ಸಮರ್ಪಣೆ ಸ್ವೀಕರಿಸುತ್ತ, ಒಬ್ಬ ಇಂಜಿನಿಯರ್ ಭ್ರಷ್ಟನಾದರೆ ಕೆಲವು ಕಟ್ಟಡಗಳು ಬೀಳಬಹುದು; ಒಬ್ಬ ವೈದ್ಯ ಭ್ರಷ್ಟನಾದರೆ ಕೆಲವು ರೋಗಿಗಳು ಸಾಯಬಹುದು; ಆದರೆ ಸಾಹಿತಿ ಭ್ರಷ್ಟನಾದರೆ ತಲೆಮಾರಿಗೆ ತಲೆಮಾರೇ ನೈತಿಕ ಅಧಃಪತನ ಹೊಂದುತ್ತದೆ. ನಾನೊಬ್ಬ ಪುಸ್ತಕಪ್ರೇಮಿ ಎಂದು ಹೇಳಿದರು.
https://www.sahityabooks.com/
#Rashtrotthana #RashtrotthanaParishat #RashtrotthanaSahitya #kannada #kannadapustaka #KannadaPustakaHabba
Project Info
- Category: News & Media
- Location: Keshava Shilpa, Bengaluru
- Completed Date: 01 Dec 2024