ಬೆಂಗಳೂರು, ನ.10: ಹೊಸ ಕಾದಂಬರಿ ಮಾಗಧ ಕುರಿತು ಲೇಖಕರಾದ ಶ್ರೀಮತಿ ಸಹನಾ ವಿಜಯಕುಮಾರ್ ಅವರೊಂದಿಗೆ ಏಷಿಯಾನೆಟ್ ಸುವರ್ಣ ನ್ಯೂಸ್ ಸಂಪಾದಕರಾದ ಶ್ರೀ ಅಜಿತ್ ಹನಮಕ್ಕನವರ್ ಅವರು ಸಂವಾದ ನಡೆಸಿಕೊಟ್ಟರು.
ಮಾಗಧ ಕಾದಂಬರಿ ಇತ್ತೀಚೆಗೆ ಅನಾವರಣಗೊಂಡಿದ್ದು, ಲೇಖಕಿ ಈ ಕೃತಿಗಾಗಿ ಸುಮಾರು 4.5 ವರ್ಷಗಳ ಅಧ್ಯಯನ, ಪ್ರವಾಸಗಳನ್ನು ನಡೆಸಿದುದರ ಬಗೆಗೆ ತಿಳಿಸುತ್ತಾ ಮಗಧ ಸಮ್ರಾಟ್ ಅಶೋಕ ಬೌದ್ಧ ಧರ್ಮದ ಪ್ರೇರಣೆಯಿಂದ ಮಹಾಅಹಿಂಸಾಮೂರ್ತಿಯಾಗಿ ಬಿಂಬಿತನಾಗಿದ್ದರ ಹಿಂದಿನ ಮಿಥ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
37 ದಿನಗಳ ಕನ್ನಡ ಪುಸ್ತಕ ಹಬ್ಬದಲ್ಲಿ (ಅ.26 – ಡಿ.1)
@ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು
ಸಹಯೋಗ – ಸಂಸ್ಕಾರಭಾರತೀ, ಬೆಂಗಳೂರು
ಸಂವಾದದ ಸಾರಸಂಗ್ರಹ:
ಇಂದಿನ ಕಾಲದಲ್ಲಿ ಕಾದಂಬರಿ ಬರೆಯುವ ಉದ್ದೇಶದಿಂದ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಇದೊಂಥರಾ ಅಳಿವಿನಂಚಿನಲ್ಲಿರುವ ಪ್ರಬೇಧದ ಅಪರೂಪದ ಲೇಖಕಿ ಎಂದೇ ಶ್ರೀಮತಿ ಸಹನಾ ವಿಜಯಕುಮಾರ್ ಅವರನ್ನು ಪರಿಚಯಿಸಿ ಶ್ರೀ ಅಜಿತ್ ಹನುಮಕ್ಕನವರ್ ತಮ್ಮ ಮಾತನ್ನು ಆರಂಭಿಸಿದರು.
ಅವರ ಮೊದಲ ಪ್ರಶ್ನೆ ಲೇಖಕಿ ಸಹನಾ ಅವರಿಗೆ, ಭಾರತ ಇತಿಹಾಸದಲ್ಲಿ ಉದ್ದೇಶಪೂರ್ವಕ ಬಿಡಬೇಕೆಂದರೂ ಬಿಡಲಾಗದ ಕ್ಯಾರೆಕ್ಟರ್ ಸಮ್ರಾಟ್ ಅಶೋಕ. ಅಶೋಕನ ಕಳಿಂಗ ಯುದ್ಧದ ನಂತರ ಹಿಂಸೆ ತ್ಯಜಿಸಿದುದು ಇವೆಲ್ಲ ನಮಗೆ ಗೊತ್ತೇ ಇದೆ. ಎಷ್ಟು ದಿನದ್ದು ಈ ಸಂಶೋಧನೆ, ಏನೇನು, ಎಲ್ಲೆಲ್ಲಿ ಹುಡುಕಿದಿರಿ ವಸ್ತುವಿಷಯವನ್ನು ಎನ್ನುವುದಾಗಿತ್ತು.
ನಾಲ್ಕೂವರೆ ವರ್ಷ ಸಂಶೋಧಿಸಿ ಬರೆದೆ ಮಾಗಧವನ್ನು ಎಂದು ಆರಂಭಿಸಿದರು. ಶಾಲಾ ವಿದ್ಯಾರ್ಥಿನಿಯಾಗಿದ್ದ ಸಹನಾ ಅವರು ನೋಡಿದ ಚಾಣಕ್ಯ ಧಾರಾವಾಹಿ ಅವರ ಮನಸ್ಸಿನಲ್ಲೇ ಉಳಿದಿದ್ದು ೨೦೨೦ರಲ್ಲಿ ಮರುಪ್ರಸಾರವಾದಾಗ ಇದೇ ಕಾದಂಬರಿಯ ವಸ್ತುವಾಗಿ ಕಾಡತೊಡಗಿತು. ದೇಶ ಸಂಚಾರದಲ್ಲಿ ಅಶೋಕನ ಶಿಲಾಲಿಪಿಗಳನ್ನು ನೋಡಿದ್ದ ಲೇಖಕಿ, ಮೌರ್ಯದಂತಹ ದೊಡ್ಡ ವಂಶದ ಮೂರನೇ ತಲೆಮಾರು ಏಕಾಏಕಿ ಶಸ್ತ್ರ ತ್ಯಜಿಸುವುದೆಂದರೆ, ಅದಕ್ಕೆ ಉದಾಹರಣೆಗಳಿವೆಯೇ? ಎನ್ನುವ ಪ್ರಶ್ನೆ ಕಾಡತೊಡಗಿ ಇತಿಹಾಸವನ್ನು ಇದ್ದಂತೆ ಸ್ವೀಕರಿಸಲಾಗದ ಮನಸ್ಥಿತಿಯ ಲೇಖಕಿ ಡಾ. ದ್ವಿವೇದಿಯವರನ್ನು ಸಂಪರ್ಕಿಸಿ ಅಶೋಕನನ್ನು ಹುಡುಕತೊಡಗಿದರು. ಡಾ. ದ್ವಿವೇದಿಯವರು ಕೊಟ್ಟ ಆಕರ ಗ್ರಂಥಗಳು ಇವರನ್ನು ಪ್ರೇರೇಪಿಸಿ ಅಶೋಕನ ಜೊತೆಗೆ ಅವನನ್ನು ಪ್ರಭಾವಿಸಿದವರ ಬಗೆಗಿನ ಅಧ್ಯಯನಕ್ಕೂ ಪ್ರೇರೇಪಿಸಿತು. ಅವರನ್ನು ಸಿಂಹಳದ ಕಡೆಗೂ ಕರೆದೊಯ್ದಿತು.
ಆಗಿನ ಕಂಟೆಂಪರರಿ ಪಾಲಿಟಿಕ್ಸ್, ಅಶೋಕನ ಭಾರತ ಹೇಗಿತ್ತು ಎನ್ನುವುದು ನಮಗೆ ಮುಖ್ಯವಾಗುತ್ತದೆ. ಆ ಬಗ್ಗೆ ಹೇಳಿ ಎನ್ನುವುದು ಶ್ರೀ ಅಜಿತ್‌ಹನುಮಕ್ಕನವರ ಪ್ರಶ್ನೆಗೆ ಸಹನಾ ಅವರ ಉತ್ತರ ಹೀಗಿತ್ತು.
ಅಶೋಕನ ಭಾರತದ ಚಿತ್ರಣ ಸರಿಯಾಗಿ ದೊರಕದು. ಚಂದ್ರಗುಪ್ತಮೌರ್ಯನ ಬಗ್ಗೆ ದೂತ ಮೆಗಾಸ್ತನೀಸ್‌ಇಂಡಿಕಾದಲ್ಲಿ ಬರೆದದ್ದಕ್ಕೂ ಅರ್ಥಶಾಸ್ತ್ರಕ್ಕೂ ವಿದ್ವಾಂಸರು ಹೋಲಿಸಿ ನೋಡಿದ್ದುಂಟು. ಬಿಂಬಿಸಾರನ ಅವಧಿಯಲ್ಲಿ ಹಾಗೆ ಬರೆದಿದ್ದು, ಉಲ್ಲೇಖ ಕಡಿಮೆ ಇದೆ. ಆತನ ಅವಧಿಯಲ್ಲಿ ರಾಜ್ಯ ವಿಸ್ತಾರವಾಗಿದೆ. ಅಶೋಕನ ಕಾಲದಲ್ಲಿ ದೂತರಿಗೆ ಪ್ರವೇಶವೇ ಇರಲಿಲ್ಲ. ಈಶಾನ್ಯದ ಭಾಗದಿಂದ ಗ್ರೀಕರು ಒಳನುಗ್ಗುವುದನ್ನು ಮೌರ್ಯರು ತಡೆಗಟ್ಟಿದ್ದು, ೫೦೦ ಕಳಿಂಗ ಹಸ್ತಿಗಳು ಸಿಗುತ್ತವೆ ಎಂದು ತಾನು ಕೈವಶ ಮಾಡಿಕೊಂಡಿದ್ದ ಪ್ರದೇಶವನ್ನು ಸೆಲ್ಯುಕಸ್‌ಬಿಟ್ಟು ಹೋದದ್ದು, ಸುವರ್ಣಗಿರಿ ಅಂದರೆ ಇಂದಿನ ಹಟ್ಟಿಮೈನ್ಸ್‌ವರೆಗೂ ಮೌರ್ಯರು ವಿಸ್ತರಿಸಿದ್ದು, ಅಶೋಕನಿಗೆ ತಕ್ಷಶಿಲೆಯ ಉಪಟಳ, ದಕ್ಷಿಣದವರನ್ನು ನಿಯಂತ್ರಿಸುವುದು ಕಠಿಣವಾಗುವುದು, ಕಳಿಂಗ ಬಹುದೊಡ್ಡ ತಲೆನೋವಾಗಿದ್ದು, ಇವೆಲ್ಲಾ ಅಶೋಕನ ಲಿಪಿಗಳಿಂದ ತಿಳಿಯಬಹುದಾಗಿದೆ ಎನ್ನುತ್ತ ಅಂದಿನ ರಾಜಕೀಯ ಸನ್ನಿವೇಶವನ್ನು ವಿವರಿಸಿದರು. ಇವತ್ತಿನ ಒಡಿಶಾ ಅಂದಿನ ಕಳಿಂಗದಲ್ಲಿ ತಾನು ಬಹಳ ಸಮಯ ಕಳೆದು ಸಂಶೋಧನೆ ನಡೆಸಿದೆ ಎನ್ನುತ್ತ ಲೇಖಕಿ ತಮ್ಮ ಸಂಶೋಧನೆಯ ಹರಹನ್ನು ತೆರೆದಿಟ್ಟರು.
ವೈದಿಕರು, ಬೌದ್ಧರು, ಜೈನರು ಬಡಿದಾಡುವ ರಕ್ತಪಾತದ ಸನ್ನಿವೇಶವಿತ್ತು ಎನ್ನುವ ಪರಿಕಲ್ಪನೆ ಇದೆ. ನಿಜಕ್ಕೂ ಅಂದಿನ ಧಾರ್ಮಿಕ ಸನ್ನಿವೇಶ ಹೇಗಿತ್ತು? ಇದು ಶ್ರೀ ಅಜಿತ್‌ಅವರ ಮುಂದಿನ ಪ್ರಶ್ನೆಯಾಗಿತ್ತು.
ಅಶೋಕನ ನಂತರ ೨೦೦ ವರ್ಷಗಳ ನಂತರ ಕಳಿಂಗದಲ್ಲಿ ಖಾರವೇಲು ಎನ್ನುವವನ ಶಾಸನದಲ್ಲಿ ಅಶೋಕನ ಕಾಲದಲ್ಲಿ ಅಸಹಿಷ್ಣುತೆಯ ಮಾತೇ ಇಲ್ಲ. ರಾಜ ಬ್ರಾಹ್ಮಣ, ಬೌದ್ಧ, ಜೈನ ಯಾರೇ ಇರಲಿ ಎಲ್ಲರೂ ಒಂದೇ ಎಂದೇ ಇದೆ; ಇಲ್ಲಿ ಬ್ರಾಹ್ಮಣ ಎಂದರೆ ಆಗೆಲ್ಲ ಹಿಂದೂ ಎಂದಿರಲಿಲ್ಲ, ಬ್ರಾಹ್ಮಣ ಎಂದೇ ಇತ್ತು, ಬೌದ್ಧಮತ ಕ್ಷೀಣವಾಗಿತ್ತು. ಅದಕ್ಕೆ ಬೌದ್ಧಶಿಲ್ಪಗಳೇ ಆಧಾರ. ಬುದ್ಧನ ಪ್ರತಿಮೆ ಇರಲಿಲ್ಲ. ಬೌದ್ಧ ಚಿಹ್ನೆಗಳಿದ್ದವೇ ಹೊರತು ವಿಹಾರಗಳಿರಲಿಲ್ಲ. ಬೌದ್ಧಮತಕ್ಕೆ ಅಸ್ತಿತ್ವವಿರಲಿಲ್ಲ, ಪ್ರಭಲವಾಗಿದ್ದವರು ಜೈನರು.
ಅಶೋಕ ಗತಿಸಿದ ೨೦೦ ವರ್ಷಗಳಲ್ಲಿ ಆ ಸ್ಥಿತಿಗೆ ಬಂದಿತ್ತಾ ಬೌದ್ಧಮತ ಎನ್ನುವ ಪ್ರಶ್ನೆಯನ್ನು ಸಹನಾ ಅವರ ಮುಂದಿಟ್ಟಾಗ, ಬುದ್ದ ಗತಿಸಿ ೨೨೫ ವರ್ಷಗಳ ನಂತರ ಅಶೋಕನ ಅವಧಿ. ಬೌದ್ಧರಿಗಿಂತ ಅಹಿಂಸೆಯನ್ನು ಹೆಚ್ಚು ಆಚರಿಸಿದ್ದು ಜೈನರು. ನನ್ನ ಅಧ್ಯಯನದಿಂದ ತಿಳಿದುಕೊಂಡದ್ದನ್ನು ನಂಬಬಹುದೇ ಎಂದು ನನಗೆ ಅನಿಸಿದ್ದಕ್ಕೆ ಉತ್ತರ ನೀಡಿದವರು ಸಿಂಹಳದ ಭಿಕ್ಕುಗಳು ಎನ್ನುತ್ತಾರೆ ಲೇಖಕಿ. ಬುದ್ಧ ಉಪನಿಷತ್ತಿನ ಋಷಿ ಎನ್ನುವುದನ್ನು ಸಿಂಹಳದ ಭಿಕ್ಕುಗಳು ಸಮರ್ಥಿಸುತ್ತಾರೆ, ಘಂಟಾಘೋಷವಾಗಿ ಹೇಳುತ್ತಾರೆ ಎನ್ನುವ ಲೇಖಕಿಯ ಅಧ್ಯಯನದ ವಿಸ್ತಾರ ತುಂಬ ದೊಡ್ಡದು. ಅಶೋಕನ ಶಾಸನಗಳನ್ನೆಲ್ಲ ನೋಡಿದಾಗ ಅಶೋಕನಿಗೆ ಬುದ್ಧನ ಬಗ್ಗೆ ಪ್ರೀತಿ ಇತ್ತು, ಆದರೆ ತಾನೇ ಭಿಕ್ಕುವಾಗಿ ಬದಲಾಗಲಿಲ್ಲ, ಬುದ್ಧ ಅಶೋಕನಿಗೆ ಒಬ್ಬ ಗಾಡಮ್ಯಾನ್ ಆಗಿದ್ದ ಎನ್ನುವುದು ಗಮನಿಸಬೇಕಾದ ಸಂಗತಿ ಎನ್ನುವುದು ಲೇಖಕಿಯ ಅಭಿಪ್ರಾಯ.
ಅಶೋಕ ಬದುಕಿರುವವರೆಗೂ ಕಳಿಂಗ ಸ್ವತಂತ್ರವಾಗಲಿಲ್ಲ. ಅಂದರೆ ಖಡ್ಗ ಬಿಟ್ಟು ರಾಜ್ಯಭಾರ ಮಾಡಲಿಲ್ಲ ಎನ್ನುವ ಮಾತು ಇಲ್ಲಿ ಚರ್ಚೆಯ ವಿಷಯವಾಯಿತು.
ಕಳಿಂಗ ಯುದ್ದದ ನಂತರ ಅಶೋಕ ಅಹಿಂಸಾವಾದಿಯಾದ ಎನ್ನುವ ಕಥೆ ಹುಟ್ಟು ಹಾಕಿದ್ದಕ್ಕೆ ಉದ್ದೇಶವಿತ್ತಾ ಎನ್ನುವ ಪ್ರಶ್ನೆ ಶ್ರೀ ಅಜಿತ್‌ಅವರದಾಗಿತ್ತು.
ಎಲ್ಲ ಮತಕ್ಕೂ ಉತ್ಕರ್ಷವಿರುತ್ತದೆ. ಬುದ್ಧನ ವಿಷಯದಲ್ಲಿ ಆತ ಶಾಖ್ಯ ರಾಜನ ಮಗ ಎನ್ನುವುದು ದೊಡ್ಡ ಅನುಕೂಲವಿತ್ತು. ಬುದ್ಧ ವಿಹಾರಗಳಲ್ಲಿ ಭಿಕ್ಕುಗಳಿಗೆ ನಿಯಮಗಳನ್ನು ಮಾಡಿ ಚೆನ್ನಾಗಿಯೇ ನಡೆಸಿದ. ಅವನ ನಂತರ ಅದು ಕ್ಷೀಣಿಸಿತ್ತು. ಅಶೋಕ ಅವರಿಗೆ ಬಲವಾದ ಆಸರೆಯಾಗಿದ್ದ ಎನಿಸುತ್ತದೆ. ಬುದ್ಧ ಮಧ್ಯಮಮಾರ್ಗಿ. ಹಾಗಾಗಿಯೇ ಅಶೋಕನಿಗೆ ಬುದ್ಧ ಪ್ರಿಯನಾಗಿರಬಹುದು ಎನ್ನುತ್ತ ಲೇಖಕಿ ಅಶೋಕನ ಮನಸ್ಥಿತಿಯನ್ನು ಅಂದಿನ ಇತಿಹಾಸದ ಪುಟಗಳನ್ನು ತಮ್ಮ ಅಧ್ಯಯನದ ಹಿನ್ನೆಲೆಯಲ್ಲಿ ತೆರೆದಿಟ್ಟರು.
ಶ್ರೀ ಅಜಿತ್‌ಅವರ ಆಹ್ವಾನದ ಮೇಲೆ ನೆರೆದ ಶ್ರೋತೃಗಳು ಸಹ ಲೇಖಕಿ ಸಹನಾ ವಿಜಯಕುಮಾರ್‌ಅವರಿಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯವನ್ನು ನಿವಾರಿಸಿಕೊಂಡರು.
ಒಟ್ಟಿನಲ್ಲಿ ಈ ಸಂವಾದ ಕಾರ್ಯಕ್ರಮವು ಮಾಹಿತಿಪೂರ್ಣವಾಗಿತ್ತು.
https://www.sahityabooks.com/
#Rashtrotthana #RashtrotthanaParishat #RashtrotthanaSahitya #kannada #kannadapustaka #KannadaPustakaHabba #samskarabharathi #samvada
Project Info
- Category: News & Media
- Location: Keshava Shilpa, Bengaluru
- Completed Date: 10 Nov 2024