
ಇತಿಹಾಸವೆಂದರೆ ಎರಡು ವಾಕ್ಯಗಳ ನಡುವಿನ ಸಂವೇದನೆ – ಶ್ರೀ ಗುರುಪ್ರಸಾದ್ ಭಟ್
ಬೆಂಗಳೂರು, ಏ. 26: “ಇತಿಹಾಸವೆಂದರೆ ಅಂಕಿಅಂಶದ ಹೊರತಾಗಿ ಎರಡು ವಾಕ್ಯಗಳ ನಡುವಿನ ಸಂವೇದನೆ. ನಾನು ಬರೆದದ್ದು ಸಾಗರದಲ್ಲಿ ಒಂದು ಬಿಂದುವಿನಷ್ಟು ಮಾತ್ರ; ಸಮುದ್ರದ ಆಳಕ್ಕೆ ನಾನಿನ್ನೂ ಹೋಗಿಲ್ಲ” ಎಂದು ಶಿವಾಜಿ ಕುರಿತು ಅಧ್ಯಯನ ನಡೆಸಿ ‘ಛತ್ರಪತಿ: ನಾ ಕಂಡಂತೆ ಶಿವಾಜಿ’; ‘ರಣದುರಂಧರ ಛತ್ರಪತಿ ಶಿವಾಜಿ’; ‘ಛತ್ರಪತಿ ಶಿವಾಜಿ: ಕಲ್ಪಿತ ಕಥೆಗಳ ಅನಾವರಣ, ಪುರಾವೆಗಳ ದರ್ಪಣ’ ಕೃತಿಗಳ ರಚನಾಕಾರರಾದ ಶ್ರೀ ಗುರುಪ್ರಸಾದ್ ಭಟ್ ಅವರು ರಾಷ್ಟ್ರೋತ್ಥಾನ ಸಾಹಿತ್ಯ ಇಲ್ಲಿನ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿದ್ದ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ ಹೇಳಿದರು.
ಇಸ್ಲಾಂ ಪ್ರವಾಹದ ವಿರುದ್ಧ ಈಜಾಡಿ ಧರ್ಮವನ್ನು ರಕ್ಷಿಸಿದ ಶಿವಾಜಿ ಮಹಾರಾಜರು ಇತಿಹಾಸದ ರೀಡಿಂಗ್ ಬಿಟ್ವೀನ್ ದ ಲೈನ್ಸ್ ಎನ್ನುವುದರ ಹಿಂದೆ ಹೋದಾಗ ಚೆನ್ನಾಗಿ ಅರ್ಥವಾಗುತ್ತಾರೆ ಎಂದರು.
ಇಂಜಿನಿಯರಿಂಗ್ ಮುಗಿಸಿ ಮಾರ್ಕೆಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ವೃತ್ತಿಜೀವನ ಪೂರೈಸಿ ನಿವೃತ್ತರಾದ ಬಳಿಕ ಆಸಕ್ತಿಯ ವಿಷಯವಾದ ಶಿವಾಜಿ ಮಹಾರಾಜರ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿ ದಾಖಲೆಗಳ ಮೂಲಕವೇ ಶಿವಾಜಿ ಮಹಾರಾಜರನ್ನು ಕುರಿತ ಆರೋಪಗಳಿಗೆ ಉತ್ತರಿಸುವ ಪ್ರಯತ್ನ ಶ್ರೀ ಗುರುಪ್ರಸಾದ್ ಅವರದು. ತಮ್ಮ 6ನೇ ತರಗತಿಯಲ್ಲಿ ಪ್ರಬಂಧಕ್ಕಾಗಿ ಭಾರತ-ಭಾರತಿ ಪುಸ್ತಕದಿಂದ ಶಿವಾಜಿ ಕುರಿತು ಪ್ರಬಂಧ ಬರೆದು 2ನೇ ಬಹುಮಾನ ಗಿಟ್ಟಿಸಿದ ಬಳಿಕವೂ ಶಿವಾಜಿ ಚಿತ್ರಗಳನ್ನು ಸಂಗ್ರಹಿಸುತ್ತಿದ್ದ ಇವರು ಮುಂಬೈನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಶಿವಾಜಿಯ ಬಹುತೇಕ ಕೋಟೆಗಳನ್ನು ವೀಕ್ಷಿಸುತ್ತ ಅಧ್ಯಯನ ಮಾಡುತ್ತ ಬಂದರು. ಸುಮಾರು 300-400 ಕೋಟೆಗಳು ಶಿವಾಜಿಯದಿದ್ದು ಅವುಗಳ ಪಾವಿತ್ರ್ಯವನ್ನು ಕಾಪಾಡಬೇಕಿದೆ ಎನ್ನುತ್ತಾರೆ.
ಪನ್ನಾಳ ಕೋಟೆ, ವಿಶಾಲ ಕೋಟೆ ಇವನ್ನೆಲ್ಲ ನೋಡುವಾಗ ಶಿವಾಜಿಯ ದೇಹದಾರ್ಡ್ಯದ ಅರಿವಾಗುತ್ತದೆ; ಅವರ ಬಲಿದಾನ ತ್ಯಾಗ ನೋಡಿದಾಗ ನಾವೇನು ಮಾಡುತ್ತಿದ್ದೇವೆ ಅನಿಸುತ್ತದೆ. ಧ್ಯೇಯಕ್ಕಾಗಿ ತ್ಯಾಗ ಮಾಡುವ ಕೆಚ್ಚು ಎಲ್ಲಿಂದ ಬರುತ್ತದೆ ಅವರಿಗೆ? ಶಿವಾಜಿ ಸ್ವಂತಕ್ಕಾಗಿ ಮಾಡದೇ ಹಿಂದವೀ ಸಾಮ್ರಾಜ್ಯಕ್ಕಾಗಿ ಮಾಡಿದರು. ಬ್ರಿಟಿಷರು ಹಿಂದವೀ ಸಾಮ್ರಾಜ್ಯ ಎನ್ನುವ ಪದವನ್ನು ಬಿಟ್ಟು ಮರಾಠಾ ಸಾಮ್ರಾಜ್ಯವೆಂದು ಕರೆದು ಭಾಷೆಗೆ ಸೀಮಿತ ಮಾಡಿದರು. ನಾವೀಗ ಹಿಂದವೀ ಸಾಮ್ರಾಜ್ಯವೆನ್ನುವ ಪದವನ್ನೇ ಬಳಸಬೇಕು ಎಂದರು.
ಶಿವಾಜಿ ಯುದ್ಧಕ್ಕೆ ಹೋಗುವಾಗ ತಾನು ಒಂದೊಮ್ಮೆ ಹಿಂದಕ್ಕೆ ಬರದಿದ್ದರೆ ಇಂಥವನನ್ನು ಪಟ್ಟಕ್ಕೆ ಕೂರಿಸಬೇಕೆಂದು ಉಯಿಲು ಮಾಡಿಡುತ್ತಿದ್ದರು. ಯುದ್ಧ ಕೈದಿಗಳನ್ನು ಗುಲಾಮರಂತೆ ಕಾಣಲಿಲ್ಲ, ಸ್ತ್ರೀಯರನ್ನು ಕೆಡಿಸಲಿಲ್ಲ. ಯುದ್ಧಕಾಲದಲ್ಲಿ ಉಗ್ರನರಸಿಂಹನಂತೆ ಇರುವ ಶಿವಾಜಿ ಬಳಿಕ ಶಾಂತವಾಗಿ ಬಿಡುತ್ತಿದ್ದರು. ಇಂತಹ ಸಾವಿರಾರು ಉತ್ತಮ ವಿಚಾರಗಳಿದ್ದು ಅವು ಬೆಳಕಿಗೆ ಬರಬೇಕಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
8 ಜನ ಪತ್ನಿಯರಿದ್ದು ಅವರಲ್ಲಿ 6 ಜನ ಬದುಕಿದ್ದರು; ತಮ್ಮ ಪತ್ನಿಯ ಅನಾರೋಗ್ಯದ ದುಃಖದ ನಡುವೆಯೂ ಆರಡಿ ಭಾರೀ ತೂಕದ ಅಫಜಲ್ ಜೊತೆಗೆ ಹೋರಾಡಲು ಪುಟ್ಟ ದೇಹದ ಶಿವಾಜಿ ಆರಡಿಯವನ ಜೊತೆಗೆ ಸೆಣಸಾಟವನ್ನು ಅಭ್ಯಾಸ ಮಾಡಿದ್ದದ್ದು ಕಂಡುಬರುತ್ತದೆ. ಶಿವಾಜಿಗೆ ವಿಜಯನಗರ ಸಾಮ್ರಾಜ್ಯ ಹೇಗೆ ಪತನಗೊಂಡಿತೆಂಬ ಅರಿವಿದ್ದು ಅವರ ಆಸ್ಥಾನದಲ್ಲಿ ಮುಸ್ಲಿಂರಿದ್ದರೂ ಉನ್ನತ ಹುದ್ದೆಯಲ್ಲಿ ಅವರಿಗೆ ಅವಕಾಶವಿರಲಿಲ್ಲ; ಶಿವಾಜಿ ಮತಾಂಧನಾಗಿರಲಿಲ್ಲ. ಆದರೆ ಮಸೀದಿಯನ್ನು ಹಾಳುಮಾಡಲಿಲ್ಲ, ಸ್ತ್ರೀಯರನ್ನು ಕೆಡಿಸಲಿಲ್ಲ. ಆತ ಕಟ್ಟಿದ ಕೋಟೆಯಲ್ಲಿ ಇಂದು ಅತಿಕ್ರಮಣ ನಡೆದಿದೆ ಎಂದರು.
ಶಿವಾಜಿಗೆ ಇತಿಹಾಸಕಾರರಿಂದ ಅನ್ಯಾಯವಾಗಿದ್ದು ಸರಿಪಡಿಸುವುದು ಕಷ್ಟವಾಗಿದೆ. ನಮ್ಮ ಇತಿಹಾಸದ ಮೇಲೆ ನಾವು ಮಾಡಿಕೊಂಡ ಅನ್ಯಾಯ ಇದು ಎಂದರು. ಶಿವಾಜಿ ಹಾಗೂ ಬೆಳವಡಿ ಮಲ್ಲಮ್ಮ ಕುರಿತ ಇತಿಹಾಸದ ಮೇಲೆ ಮಾತನಾಡುತ್ತ ಇತಿಹಾಸವನ್ನು ಆಧಾರ ಸಹಿತ ಸರಿಪಡಿಸಲು ಪ್ರಯತ್ನಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಾಜಿಯ ಕಾಲದ ಸವಾಲು ಈಗಲೂ ಇದೆ. ಅವನ್ನು ಎದುರಿಸುವ ಬಗೆಯನ್ನು ಯೋಚಿಸಬೇಕು. ದೇಹದಾರ್ಢ್ಯ ಬೆಳೆಸಿಕೊಳ್ಳಬೇಕು. ಖಡ್ಗಕ್ಕೆ ಖಡ್ಗದಿಂದಲೇ ಉತ್ತರಿಸಬೇಕು ಎಂದ ಶ್ರೀ ಗುರುಪ್ರಸಾದ್ ಭಟ್ ಅವರು ಶಿವಾಜಿಯ ಕುರಿತ ಕೇಳುಗರ ಪ್ರಶ್ನೆಗೆ ತಮ್ಮ ಆಳ ಅಧ್ಯಯನದ ಹಿನ್ನೆಲೆಯಲ್ಲಿ ಉತ್ತರಿಸಿ ಶಿವಾಜಿಯ ಕುರಿತ ಹಲವು ಸಂಶಯಗಳನ್ನು ದೂರಮಾಡಿದರು.
https://sahityabooks.com/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #matukate
Project Info
- Category: News & Media
- Location: Keshava Shilpa, Bengaluru
- Completed Date: 26 Apr 2025