ರಾಷ್ಟ್ರೋತ್ಥಾನ ಸಾಹಿತ್ಯದಿಂದ ಐತಿಹಾಸಿಕ ತಥ್ಯ ಮಥನ ಹಾಗೂ ಸತ್ಯ ಕಥನದ 3 ಕೃತಿಗಳ ಲೋಕಾರ್ಪಣೆ: ಪೂಜ್ಯ ಸ್ವಾಮಿ ವೀರೇಶಾನಂದಜಿ ಮಹಾರಾಜ್, ಶ್ರೀ ಚಕ್ರವರ್ತಿ ಸೂಲಿಬೆಲೆ ಮೊದಲಾದ ಗಣ್ಯರಿಂದ
ಬೆಂಗಳೂರು, ನ. 16: ಕನ್ನಡ ಪುಸ್ತಕ ಹಬ್ಬದ 22ನೆಯ ದಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಐತಿಹಾಸಿಕ ತಥ್ಯ ಮಥನ ಹಾಗೂ ಸತ್ಯ ಕಥನದ 3 ಕೃತಿಗಳನ್ನು ತುಮಕೂರು ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ವೀರೇಶಾನಂದಜಿ ಮಹಾರಾಜ್; ಲೇಖಕರು, ವಾಗ್ಮಿ ಹಾಗೂ ಸಂಘಟಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ; ಪ್ರಕಟಿತ ಪುಸ್ತಕಗಳ ಲೇಖಕರಾದ ಶ್ರೀ ಮಂಜುನಾಥ ಅಜ್ಜಂಪುರ ಮತ್ತು ಶ್ರೀ ಬಿ. ಪಿ. ಪ್ರೇಮಕುಮಾರ್; ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಕೋಶಾಧ್ಯಕ್ಷರಾದ ಶ್ರೀ ನಾರಾಯಣ ಕೆ. ಎಸ್. ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.
ಲೋಕಾರ್ಪಣಗೊಂಡ ಪುಸ್ತಕಗಳು:
- ಶ್ರೀ ಮಂಜುನಾಥ ಅಜ್ಜಂಪುರ ಅವರ – ಹಿಂದೂ ದೇವಾಲಯಗಳು: ಇಸ್ಲಾಮೀ ವಿಧ‍್ವಂಸದ ಇತಿಹಾಸ (ಸಂಪುಟ 1), ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ
- ಶ್ರೀ ಬಿ. ಪಿ. ಪ್ರೇಮಕುಮಾರ್ ಅವರ – ಅಗ್ನಿಗರ್ಭ ಚಟ್ಟೋಗ್ರಾಂ ವೀರರ ಸಾಹಸಗಾಥೆ: ಮಾಡಿ ಮಡಿದವರು
ಈ ಪುಸ್ತಕಗಳೂ ಒಳಗೊಂಡಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಎಲ್ಲ ಪುಸ್ತಕಗಳೂ ರಿಯಾಯಿತಿಯಲ್ಲಿ ಲಭ್ಯ ಇವೆ, Onlineನಲ್ಲಿ ಕೂಡ. https://www.sahityabooks.com/
37 ದಿನಗಳ ಕನ್ನಡ ಪುಸ್ತಕ ಹಬ್ಬ (ಅ.26 – ಡಿ.1)
@ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು
Locate: https://maps.app.goo.gl/bXdRKaPHmheFFLL9A
ಗಣ್ಯರ ಭಾಷಣಗಳ ಸಾರಸಂಗ್ರಹ:
ಅನಾವರಣಗೊಂಡ ಮೂರು ಕೃತಿಗಳ ಪರಿಚಯವನ್ನು ಮಾಡುತ್ತ ಶ್ರೀ ಚರ್ಕವರ್ತಿ ಸೂಲಿಬೆಲೆ ಅವರು ಹಳೆಯ ಇತಿಹಾಸವನ್ನು ಹೊಸ ಸ್ವರೂಪದಲ್ಲಿ ಕೊಡುವ ಕೃತಿಗಳಿವು ಎಂದರು. ನಿರಾಕರಣವಾದ ಜಗತ್ತಿಗೆ ತಗುಲಿದ ರೋಗ. ಹಿಂದೂಗಳೂ ಈ ರೋಗಕ್ಕೆ ತುತ್ತಾಗಿದ್ದು ಹೇಗೆ ಎನ್ನುವುದನ್ನು ʼನೆಗೇಷನಿಸಂ ಇನ್ ಇಂಡಿಯಾʼ ಕೃತಿ ಹೇಳುತ್ತದೆ.
ಬಹುಶಃ ಆ ಕೃತಿಯ ಮುಂದುವರಿದ ಭಾಗ ಹಿಂದೂ ದೇವಾಲಯಗಳು: ಇಸ್ಲಾಮೀ ವಿಧ‍್ವಂಸದ ಇತಿಹಾಸ (ಸಂಪುಟ 1) ಕೃತಿ. ಇತಿಹಾಸದಲ್ಲಿ ಯಾವ ಘಟನೆ ನಡೆದಿದೆಯೋ ಕಾಲಕ್ರಮದಲ್ಲಿ ಆ ಘಟನೆ ನಡೆದೇ ಇಲ್ಲ ಎನ್ನುವುದನ್ನು ನಿರಾಕರಣವಾದ ಎಂದು ಕರೆಯಬಹುದು. ಇತಿಹಾಸದಲ್ಲಿ ಆಗಿದ್ದನ್ನು ಆಗಿದೆ ಎಂದು ಹೇಳುವುದು ಕಡಿಮೆಯಾಗಿದ್ದು, ನಡೆದದ್ದನ್ನು ನಿರಾಕರಿಸುತ್ತೇವೆ ಅಥವಾ ಗೌಣ ಮಾಡುವ ಪ್ರಯತ್ನ ಮಾಡುತ್ತೇವೆ. ಲೂಟಿ, ದೇವಾಲಯದ ನಾಶವನ್ನು ಒಪ್ಪಿಕೊಳ್ಳುವ ನಾವು ಅತ್ಯಾಚಾರದ ವಿಚಾರ ಬಂದಾಗ ಅದನ್ನು ಗೌಣವಾಗಿಸುತ್ತೇವೆ ಅಥವಾ ನಿರಾಕರಿಸುತ್ತೇವೆ. ಮಾಡಿದ್ದಕ್ಕೂ ಬೇರೆ ಕಾರಣವನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಲೂಟಿ ನಾಶದಂತಹ ಘಟನೆಗಳನ್ನು ಸ್ವಾತಂತ್ರ್ಯಪೂರ್ವದಿಂದಲೂ ನಿರಾಕರಿಸುತ್ತಲೇ ಬಂದು, ಸ್ವಾತಂತ್ರ್ಯವನ್ನು ಪಡೆದು ಗೆದ್ದ ನಾವು ಇತಿಹಾಸವನ್ನು ಪುನರ್ ರೂಪಿಸಬೇಕಾಗಿತ್ತು; ಆದರೆ ನಾವು ಗೆದ್ದೂ ಸೋತವರಂತೆ ಬದುಕುತ್ತಿದ್ದೇವೆ. ಇವನ್ನೆಲ್ಲ ಅಧ್ಯಯನದ ಮೂಲಕ, ದಾಖಲೆಗಳ ಮೂಲಕ ಹೇಳುವ ಪ್ರಯತ್ನ ಅತ್ಯಂತ ಕಡಿಮೆ ಆಗಿದೆ.
ಸೀತಾರಾಮ ಗೋಯಲ್, ರಾಮಸ್ವರೂಪ್ ಅವರ ಕಾಲದಲ್ಲಿ ಅದು ಅತ್ಯಂತ ಎತ್ತರಕ್ಕೆ ಬೆಳೆದಿತ್ತು. ನಾವು ಎಂದೂ ಪಠ್ಯದಲ್ಲಿ ಓದಿರದ ವಿಷಯಗಳನ್ನು ಹೊ. ವೆ. ಶೇಷಾದ್ರಿ ಅವರ ದೇಶವಿಭಜನೆಯ ದುರಂತ ಕಥೆ ಹೇಳಿತು. 90ರ ದಶಕದಲ್ಲಿ ಅದು ಕಡಿಮೆ ಆಯಿತು. ಅಂತಹ ಪ್ರಯತ್ನ ಸೀತಾರಾಮ್ ಗೋಯಲ್ ಅವರಿಂದ ಆಯಿತು. ಅದರ ಫಲವೇ ಈ ಕೃತಿ ಎನ್ನಬಹುದು. ಸಮಸ್ಯೆ ದೊಡ್ಡದಿದ್ದರೂ ಅದರ ಒಂದು ತುದಿ ಮಾತ್ರ ನಮಗೆ ಕಾಣುತ್ತದೆ ಎನ್ನುತ್ತಾರೆ ಗೋಯಲ್ ಎಂದು ಹೇಳಿದ ಚಕ್ರವರ್ತಿಯವರು ಗೋಯಲ್ ಅವರ ಕೃತಿಯನ್ನು ಕಾದಂಬರಿಯಂತೆ ಓದುವುದು ಅಸಾಧ್ಯ, ಅದಕ್ಕೆ ಒಂದು ಉದ್ದೇಶವಿರಬೇಕು, ತಯಾರಿ ಇರಬೇಕು ಎಂದರು.
ನಿಜ ಇತಿಹಾಸ ದಾಖಲಾಗಬೇಕು. ಹೆಣ್ಣನ್ನು ಭೋಗವಾದದ ಅಡಿಯಲ್ಲಿ ಇಡುವ ಒಂದು ಮತ ಹಾಗೂ ಹೆಣ್ಣನ್ನು ದೈವತ್ವಕ್ಕೇರಿಸುವ ಇನ್ನೊಂದು ಧರ್ಮ ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು. ದೇವರು ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ನಮ್ಮ ಧರ್ಮ ಹೇಳಿದರೆ, ತನ್ನನ್ನು ಯಾರು ಒಪ್ಪುವುದಿಲ್ಲವೋ ಅಂತವರನ್ನು ಬಹಿಷ್ಕರಿಸಿ, ವಿಗ್ರಹವನ್ನು ಚೂರು ಮಾಡಿ ಎನ್ನುತ್ತದೆ ಆ ಮತ. ಈ ಕೃತಿಯಲ್ಲಿ 150 ಪುಟದಲ್ಲಿ ಯಾವ ದೇವಾಲಯ ಒಡೆದು ಮಸೀದಿಯಾಗಿದೆ ಎನ್ನುವ ಪಟ್ಟಿಯೇ ಇದೆ. ಈ ಕೃತಿ ಇಷ್ಟರಮಟ್ಟಿಗೆ ಬೆಳಕು ಚೆಲ್ಲುತ್ತದೆ ಎಂದು ಕೃತಿಯ ಬಗ್ಗೆ ಹೇಳಿದರು.
ಅಗ್ನಿಗರ್ಭ ಚಟ್ಟೋಗ್ರಾಂ ವೀರರ ಸಾಹಸಗಾಥೆ: ಮಾಡಿ ಮಡಿದವರು ಕೃತಿಯನ್ನು ಬರೆದ ಶ್ರೀ ಬಿ. ಪಿ. ಪ್ರೇಮಕುಮಾರ್ ಅವರು ಬಂಗಾಳದಲ್ಲೇ ಇದ್ದು ಆಳವಾದ ಅಧ್ಯಯನ ಮಾಡಿ ಕೃತಿಯನ್ನು ಬರೆದಂತಿದೆ ಎಂದರು.
ಶ್ರೀ ಬಿ. ಪಿ. ಪ್ರೇಮಕುಮಾರ್ ಅವರಿಗೆ “ಸುಮಾರು 6 ವರ್ಷ ಈ ಕೃತಿಯನ್ನು ರಚಿಸಲು ಬೇಕಾಯಿತು. ದೇಶಪ್ರೇಮಿಗಳನ್ನು ನಮ್ಮವರೆಂದು ಹೇಳಿಕೊಳ್ಳಲಿಕ್ಕೆ ರಾಜಕೀಯ ಅಡ್ಡಬರಬಾರದು, ಅಂತಹವರನ್ನು ಗೌರವಿಸಬೇಕು. ಭಗತ್‍ಸಿಂಗ್ ಎಲ್ಲರಿಗೂ ಪರಿಚಯವಿದ್ದರೆ, ಅಷ್ಟೇ ಸಾಹಸ ತೋರಿದ ಸೂರ್ಯಸೇನ್ ಫೋಟೋ ಕೂಡ ನಮಗೆ ದೊರಕುವುದಿಲ್ಲ; ಈ ತಾರತಮ್ಯ ಏಕೆ ಎಂದು ಕೇಳಿದರು.
ಶ್ರಿ ಮಂಜುನಾಥ್ ಅಜ್ಜಂಪುರ ಅವರು “ಪ್ರೇಮಕುಮಾರ್ ಅವರ ಕೃತಿ ನಮ್ಮ ಮಂಕನ್ನು ಕಳೆಯುತ್ತದೆ. ʼವಾಯ್ಸ್ ಆಫ್ ಇಂಡಿಯಾʼ ಸರಣಿಗೆ 145 ಕೋಟಿ ಭಾರತೀಯರ ವರ್ತಮಾನ ಮತ್ತು ಭವಿಷ್ಯವನ್ನು ಬದಲಾಯಿಸುವ ಶಕ್ತಿ ಇದೆ. ಇತಿಹಾಸ ಯಾವ ರೀತಿ ಇದೆ, ಯಾವ ರೀತಿ ಇರಬೇಕು ಎನ್ನುವುದನ್ನು ಗೋಯಲ್ ಹೇಳಿದರು. ಗೋಯಲ್ ಅವರ ಕೃತಿಗಳ ಕೆಲಸ ಮಾಡುವ ಮುನ್ನ ನಾನು ಹೊ. ವೆ. ಶೇಷಾದ್ರಿಯವರನ್ನು ನೆನೆಯುತ್ತೇನೆ. ಶುದ್ಧ ಸಾಹಿತ್ಯವನ್ನು ಕೊಡುವುದೇ ನಾವು ಹೊ. ವೆ. ಶೇಷಾದ್ರಿ ಅವರಿಗೆ ಕೊಡುವ ಗೌರವ” ಎಂದರು.
ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತ ಶ್ರೀ ವಿರೇಶಾನಂದಜೀ ಅವರು “ಇಂತಹ ಕಾರ್ಯಕ್ರಮಕ್ಕೆ ಹೆಚ್ಚುಹೆಚ್ಚು ಮಕ್ಕಳು, ಯುವಜನರು ಬರಬೇಕು. ಸ್ವಾತಂತ್ರ್ಯ ಬಂದ ನಂತರವೂ ಅದೇ ಹಳಸಲು ವಿಚಾರವನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಜನ ಉದಾರಿಗಳಲ್ಲ, ನಿಷ್ಕ್ರಿಯರಾಗಿದ್ದೇವೆ. ನಮ್ಮಲ್ಲಿ ಧಾರ್ಮಿಕ ಶಿಕ್ಷಣ ತುಟ್ಟಿಯಾಗಿದೆ. ಆಚರಣೆಗಳನ್ನು ಮಾತ್ರ ಮಾಡುವ ನಾವು ಅದರ ಒಳಹೊಕ್ಕು ನೋಡುವುದಕ್ಕೆ ಪ್ರಯತ್ನಿಸುವುದಿಲ್ಲ. ನಮ್ಮ ತರುಣರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಿದ್ದರೆ ಭಾರೀ ಬೆಲೆ ತೆರಬೇಕಾದೀತು” ಎಂದು ಎಚ್ಚರಿಸಿದರು.
ಇಂದಿನ ಮನುಷ್ಯ ಹೊಸ ಮನುಷ್ಯನಾಗುವ ಅಗತ್ಯವಿದೆ ಎನ್ನುವ ವಿವೇಕಾನಂದರ ಮಾತನ್ನು ಪುನರುಚ್ಛರಿಸುತ್ತ, ಮನುಷ್ಯನನ್ನು ಸಮರ್ಥನನ್ನಾಗಿ ಮಾಡದೇ ಉಡುಗೊರೆ ಕೊಟ್ಟರೆ ಆತ ನಿಷ್ಕ್ರಿಯನಾಗುತ್ತಾನೆ ಎಂದು ನಮ್ಮಲ್ಲಿನ ನಿಷ್ಕ್ರಿಯತೆಯನ್ನು ಎತ್ತಿ ತೋರಿಸಿದರು. ಶಿಕ್ಷಕರು ಸಿಲೆಬಸ್ ಮುಗಿಸುವುದರಲ್ಲಿ ಕಾರ್ಯನಿರತರಾಗಿದ್ದು ಅಧ್ಯಯನವನ್ನು ಮರೆತಿದ್ದಾರೆ. ವಿಶ್ವವಿದ್ಯಾಲಯದಿಂದ ರಾಷ್ಟ್ರನಿರ್ಮಾಣ, ವ್ಯಕ್ತಿನಿರ್ಮಾಣವನ್ನೇ ನಿರೀಕ್ಷಿಸುವಂತಿಲ್ಲ ಎನ್ನುತ್ತ ನಾನೊಬ್ಬ ಸಂನ್ಯಾಸಿಯಾಗಿದ್ದು, ಒಳ್ಳೆಯ ವಿಚಾರದ ಹೊರತಾಗಿ ನಾನೇನೂ ಕೊಡಲಾರೆ; ಈಗಲೂ ಒಳ್ಳೆಯ ವಿಚಾರವಿದ್ದು ಹರಡುತ್ತಿರುವುದು ಸಾಲದು, ಸಾಂಕ್ರಾಮಿಕದ ತರಹ ಅದು ಹರಡುತ್ತಿರಬೇಕು ಎಂದರು.
ಎಲ್ಲಕ್ಕೂ ವೈಜ್ಞಾನಿಕ ಸತ್ಯವನ್ನು ಕೇಳುತ್ತಾರೆ. ವಿಜ್ಞಾನ ಇಂದ್ರಿಯ ಸತ್ಯ, ಅಧ್ಯಾತ್ಮ ಇಂದ್ರಿಯಾತೀತ ಸತ್ಯ. ವಿಜ್ಞಾನದ ಸತ್ಯ ಬದಲಾಗುತ್ತಿರುತ್ತದೆ. ಧರ್ಮ ಬೇಡ, ವಿಜ್ಞಾನ ಸಾಕು ಎಂದರೆ ನಾವು ಹ್ಯಾಂಡಿಕ್ಯಾಪ್ ಆಗುತ್ತೇವೆ. ಮೂರ್ತಿಪೂಜೆ ಅಧ್ಯಾತ್ಮದ ಹಾದಿಯಲ್ಲಿ ಆರಂಭವಾಗುತ್ತದೆ. ಸಾಂತತೆ ಮೂರ್ತಿಪೂಜೆ, ಸಾಂತತೆಯಿಂದ ಅನಂತತೆಯೆಡೆಗೆ ಸಾಗಬೇಕು. ಜಗತ್ತೇ ಒಪ್ಪಿಕೊಂಡ ವ್ಯಕ್ತಿತ್ವ ವಿವೇಕಾನಂದರದು, ಅಧ್ಯಾತ್ಮ ಈ ದೇಶದ ಶಕ್ತಿ ಎಂದ ವಿವೇಕಾನಂದರ ಅಧ್ಯಯನ ಭಾರತಕ್ಕೆ ಇಂದಿನ ಅಗತ್ಯ ಎಂದರು.
#Rashtrotthana #RashtrotthanaParishat #RashtrotthanaSahitya #kannada #kannadapustaka #KannadaPustakaHabba #samskarabharathi #bookrelease #chakravarthysulibele #veereshanandaji
Project Info
- Category: News & Media
- Location: Keshava Shilpa, Bengaluru
- Completed Date: 16 Nov 2024