1 ತಿಂಗಳ (ನ. 1 – ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿ
ಬೆಂಗಳೂರು, ನವೆಂಬರ್ 26: ವಿಶೇಷ ಉಪನ್ಯಾಸ – ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ
ಸಮಗ್ರ ರಾಷ್ಟ್ರದ ಬಗ್ಗೆ ಹೇಳುವ ಏಕೈಕ ನಾಡಗೀತೆ ನಮ್ಮದು. ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಮೊದಲು ರಾಷ್ಟ್ರವನ್ನು ಜನನಿ ಎಂದು ನೆನೆದು ನಂತರ ದೇವರಿಗೆ ಹೋಲಿಸಲಾಗಿದೆ ಎಂದು ಸಾವರ್ಕರ್ ಸಾಹಿತ್ಯ ಸಂಘದ ಸ್ಥಾಪಕ ಅಧ್ಯಕ್ಷ ಮತ್ತು ವಿಮರ್ಶಕ, ಡಾ. ಜಿ. ಬಿ. ಹರೀಶ್ ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ರಾಷ್ಟ್ರೋತ್ಥಾನ ಪರಿಷತ್‍ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ 3ನೇ ಕನ್ನಡ ಪುಸ್ತಕ ಹಬ್ಬದ ಭಾಗವಾಗಿ ಈ ಸಂಜೆ ಆಯೋಜಿಸಲಾಗಿದ್ದ ‘ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ’ ಎಂಬ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹಲವು ರಾಜ್ಯಗಳಲ್ಲಿ ನಾಡಗೀತೆಗಳು ಇವೆಯಾದರೂ, ಅಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಆದ್ದರಿಂದ ಕುವೆಂಪು ಅವರ ರಚನೆ ರಾಷ್ಟ್ರ ಹಾಗೂ ರಾಜ್ಯದ ಸಮಗ್ರತೆಯನ್ನು ಒಳಗೊಂಡಿದ್ದು, ಇದರಿಂದ ಅವರ ಮೇರು ವ್ಯಕ್ತಿತ್ವ ತಿಳಿಯುತ್ತದೆ ಎಂದು ಹೇಳಿದರು.
ರಾಷ್ಟ್ರ ಕವಿ ಕುವೆಂಪು ಅವರಿಗೆ ನಾಡಿನ ಬಗ್ಗೆ ವಿಶೇಷ ಕಾಳಜಿ ಮತ್ತು ಚಿಂತನೆಯಿತ್ತು. ಭಾರತ ಮತ್ತು ಕರ್ನಾಟಕ ಅಭಿನ್ನವಾದದ್ದು ಎನ್ನುವುದು ಅವರ ಅಭಿಪ್ರಾಯವಾಗಿತ್ತು ಇದನ್ನು ನಮ್ಮ ನಾಡಗೀತೆಯಲ್ಲಿ ಸಹ ನೋಡಬಹುದಾಗಿದೆ ಎಂದು ಹೇಳಿದರು.
ಕವಿ ಕುವೆಂಪು ಅವರು ನಾಡಗೀತೆಯಲ್ಲಿ ಭಾರತೀಯತೆಯನ್ನು ಎತ್ತಿ ಹಿಡಿಯುತ್ತಾ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸಿದರು. ನಮ್ಮ ಸಂಸ್ಕೃತಿಯ ಮೂಲ ಚಿನ್ನದಂತೆ ಎಂದು ತಮ್ಮ ರಚನೆಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಲವು ಸಂದರ್ಭಗಳಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜತೆಗೆ ಬದಲಾವಣೆಗಳನ್ನು ತರುವುದೂ ಅಗತ್ಯವಾಗಿದೆ ಎನ್ನುವುದು ಅವರ ಆಲೋಚನೆಯಾಗಿತ್ತು. ಪೂರ್ವಜರ ಚಿಂತನೆಯನ್ನು ಅಳವಡಿಸಿಕೊಂಡು ಕಾಲಕಾಲಕ್ಕೆ ಬದಲಾವಣೆಗಳನ್ನು ತರುವುದು ಮನುಕುಲಕ್ಕೆ ಒಳಿತನ್ನು ಮಾಡುತ್ತದೆ ಎಂದು ಪ್ರತಿಪಾದಿಸಿದರು ಮತ್ತು ಅದನ್ನು ಅವರು ತಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಂಡು ಬದುಕಿದರು ಎಂದು ನುಡಿದರು.
ಮೂಲ ಕುವೆಂಪು ಮತ್ತು ಉತ್ಸವ ಮೂರ್ತಿ ಕುವೆಂಪು ಬೇರೆ. ಆದರೆ, ಅವರನ್ನು ಒಂದು ಚಿಂತನೆಗೆ ಅಥವಾ ವರ್ಗಕ್ಕೆ ಸೀಮಿತಗೊಳಿಸಲಾಗಿದೆ. ಅವರು ತಮ್ಮ ಅಂತರಾಳದಿಂದ ಅಧ್ಯಾತ್ಮ, ಸಂಸ್ಕೃತಿ, ಸಂಸ್ಕಾರಗಳ ಪ್ರತಿಪಾದಕರಾಗಿದ್ದರು. ಆದರೆ ಅವರನ್ನು ನಾಸ್ತಿಕರಂತೆ ಬಿಂಬಿಸುತ್ತಿರುವುದು ಶೋಚನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುವೆಂಪು ಅವರು ನಿಜ ಸ್ವರೂಪದಲ್ಲಿ ಕನ್ನಡದ ಮನಸ್ಸುಗಳ ಅತ್ಯುಚ್ಚ ಪ್ರತಿನಿಧಿಯಾಗಿದ್ದಾರೆ. ಮುಖ್ಯವಾಗಿ ಅವರ ಕವಿತ್ವದ ಸೌಂದರ್ಯ ಬೇರೆಡೆ ಕಂಡುಬರುವುದು ವಿರಳವಾಗಿದೆ. ಅವರು ಆಧುನಿಕ ಚಿಂತಕರಾಗಿದ್ದರೂ ಅಧ್ಯಾತ್ಮ ಸಂಸ್ಕೃತಿ ಮತ್ತು ಪ್ರಕೃತಿಯ ಆರಾಧಕರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಇಂಡಿಯಾ ಕನ್ನಡ ಸರಣಿಯ ಗೌರವ ಸಂಪಾದಕ ಶ್ರೀ ಮಂಜುನಾಥ ಅಜ್ಜಂಪುರ, ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ, ಶ್ರೀ ವಿಘ್ನೇಶ್ವರ ಭಟ್, ಪ್ರಬಂಧಕ ಶ್ರೀ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಸಾಹಿತ್ಯ
#93/1, ‘ಕೇಶವ ಶಿಲ್ಪ’, ಕೆಂಪೇಗೌಡ ನಗರ, ಬೆಂಗಳೂರು – 560 004
ದೂ: 080 2661 2730
ಇಮೇಲ್: sahitya@rashtrotthana.org
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #Kuvempu #GBHarish
Project Info
- Category: News & Media
- Location: Keshava Shilpa, KG Nagar, Bengaluru
- Completed Date: 26 Nov 2023